ಬೆಂಗಳೂರು: ಆರ್ಟಿಇ ಅಡಿಯಲ್ಲಿ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಕ್ಕಳ ಶಾಲಾ ದಾಖಲಾತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ದಾಖಲಾತಿ ಅವಧಿಯನ್ನು ಜು.16 ರವರಗೆ ವಿಸ್ತರಣೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
2021-22ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ(ಆರ್ಟಿಇ) 2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಹ 11,531 ಅರ್ಜಿಗಳಲ್ಲಿ ಮೊದಲನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 4,755 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ.
ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ. ಈ ಹಿಂದೆ ಎಲ್ಲಾ ಪೋಷಕರು ಜೂ.25 ರಿಂದ ಜು.09 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ತಿಳಿಸಿತ್ತು.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಾರು ಕಾರಣ? ಈ ಬಗ್ಗೆ ಯಾರು, ಏನಂದ್ರು? ಈ ವಿಡಿಯೋ ನೋಡಿ..
ಆದರೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಸಂಖ್ಯೆಯ ದಾಖಲಾತಿಯಾಗಿರುವುದರಿಂದ ಹಾಗೂ ಆರ್ಟಿಇ ಪೇರೆಂಟ್ಸ್ ಟೀಚರ್ಸ್ ಅಸೋಸಿಯೇಷನ್ ಮನವಿಯ ಮೇರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.ಹಂಚಿಕೆ ವಿವರ ಇಲಾಖಾ ವೆಬ್‌ಸೈಟ್ www.schooleducation.kar.nic.in ನಲ್ಲಿ ಲಭ್ಯವಿದೆ.