ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ರಾಜೇಶ್ ವಿಆರ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಸಾರ್ವಜನಿಕ ಠೇವಣಿಗಳ ದುರ್ಬಳಕೆ ಆರೋಪ ಸಂಬಂಧ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮ ಪ್ರಕರಣಕ್ಕೆ ಕುರಿತಂತೆ ಆರ್‌ಬಿಐನ ತಪಾಸಣಾ ವರದಿ ಬಂದಿದ್ದು, ಈ ವರದಿ ಪ್ರಕಾರ, ಬ್ಯಾಂಕ್‌ನಿಂದ ಹೊರತೆಗೆಯಲಾದ ನಿಧಿಯ ಪ್ರಮುಖ ಫಲಾನುಭವಿ ರಾಜೇಶ್ ವಿಆರ್ ಆಗಿದ್ದಾರೆ. ಬ್ಯಾಂಕ್‌ನಿಂದ 40 ಕೋಟಿ ರೂಪಾಯಿಗಳಷ್ಟು ಸಾಲ ಪಡೆದಿದ್ದಾರೆ. ಆದರೆ, ಅದನ್ನು ಮರುಪಾವತಿ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ಬಂಧಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಿದೆ.
ಅಲ್ಲದೇ, ಇತರ ಸಹಕಾರಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿದ ಆರೋಪ ಪ್ರಕರಣಗಳಲ್ಲೂ ರಾಜೇಶ್ ವಿಆರ್ ಮತ್ತವರ ಪತ್ನಿ ವಿರುದ್ಧ ಅನೇಕ ಎಫ್‌ಐಆರ್ ದಾಖಲಾಗಿವೆ ಎಂಬುದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಪತ್ನಿ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾಲದ ಸಂಬಂಧ ನೊಟೀಸ್ ಜಾರಿ ಮಾಡಿದ್ದರೂ ಮರು ಪಾವತಿಸದೇ ಇರುವುದು ಬಯಲಾಗಿತ್ತು.
ಪ್ರಕರಣದ ಹಿನ್ನೆಲೆ: ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಜನರಿಂದ ಹಣ ಠೇವಣಿ ಮಾಡಿಕೊಂಡು ವಂಚಿಸಿದ ಆರೋಪ ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲಿದೆ. ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ನೂರಾರು ಕೋಟಿ ರೂಪಾಯಿ ಹಣ ಹೂಡಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವ ಮುನ್ನವೇ 45.32 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸಿರಾಸ್ತಿಯನ್ಕು ಇಡಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು.
ಇದಕ್ಕೂ ಮೊದಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ ಠೇವಣಿದಾರರ ರಕ್ಷಣೆ ಕಾಯಿದೆಯ ಯು/ಎಸ್ 9 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳಡಿ ಬ್ಯಾಂಕ್ ಮತ್ತು ಇತರರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದರು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಿಬಿಐ ತನಿಖೆ ಬಗ್ಗೆ ನಿರ್ಧಾರ: ಇದೇ ಜನವರಿ 17ರಂದು ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ಗಳ ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಶಿಫಾರಸು ಮಾಡುವುದಾಗಿ ಎಂದು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಹೇಳಿದ್ದರು. ಈ ವಂಚನೆ ಪ್ರಕರಣಗಳಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆದರೆ, ಸಾಲ ವಸೂಲಾತಿಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸಿಬಿಐಗೆ ವಹಿಸಿದರೆ ಠೇವಣಿದಾರರಲ್ಲೂ ವಿಶ್ವಾಸ ಮೂಡಲಿದೆ ಎಂದು ಸಚಿವರು ತಿಳಿಸಿದ್ದರು. ಅಲ್ಲದೇ, ಈ ರೀತಿ ವಂಚನೆ ತಡೆಗೆ ಕಾನೂನಿನಲ್ಲಿ ತಿದ್ದುಪಡಿ ತರುವ ಕುರಿತಂತೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಗುರುರಾಘವೇಂದ್ರ, ವಶಿಷ್ಟ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ ವಹಿಸಲು ಶಿಫಾರಸು: ಸಚಿವ ಎಸ್.ಟಿ.ಸೋಮಶೇಖರ್