ಬೆಂಗಳೂರು: ''ಈ ಹಿಂದೆ 17 ಜನ ಮುಠ್ಠಾಳರು ಪಕ್ಷ ಬಿಟ್ಟು ಹೋಗಿದ್ದರು. ಅವರು ಅಧಿಕಾರಕ್ಕಾಗಿ ಹೋಗಿರಬಹುದು. ಈಗ ಯಾರೂ ಕೂಡ ಇಲ್ಲಿಂದ ಬಿಜೆಪಿಗೆ ಹೋಗಲ್ಲ'' ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು. ಆಪರೇಷನ್ ಕಮಲ ಯತ್ನ ಆರೋಪಿಸಿ ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ''ಸಿಎಂ ಹಾಗೂ ಡಿಸಿಎಂ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡ್ತಿದ್ದಾರೆ. ಏನು ಮಾಡೋಕೆ ಆಗುತ್ತೆ, ಮುಠ್ಠಾಳರಾಗಿ ಹೋಗಿದ್ದೂ ಅವರೇ, ಈಗ ಮತ್ತೆ ಅಧಿಕಾರಕ್ಕಾಗಿ ಬರ್ತಿದ್ದಾರೆ. ಕುಮಾರಸ್ವಾಮಿನೇ ಕರ್ಕೊಂಡಿದ್ದಾರೆ ಅಂದ ಮೇಲೆ ನಾವೇನು ಮಾಡೋಕೆ ಆಗುತ್ತೆ?. ಹಿಂದೆ ಅವರು ಸರ್ಕಾರ ಹಾಳು ಮಾಡಿಯೇ ಹೋಗಿದ್ದರು. ಕರ್ಕೊಳ್ಳೋದು ಬಿಡೋದು ಪಕ್ಷದ ಹಿರಿಯರಿಗೆ ಬಿಟ್ಟಿದ್ದು'' ಎಂದು ಕಿಡಿಕಾರಿದರು.
ಎಷ್ಟೇ ಆಮಿಷ ಒಡ್ಡಿದರೂ ಕೂಡ ನಾವು ಹೋಗಲ್ಲ: ''ರಾಜಕೀಯದಲ್ಲಿ ಡಿಕೆಶಿ ಮುಂದೆ ಬರಬಾರದು ಅಂತ ಮಾಡಿದ್ದಾರೆ. ನಾವು ಗಟ್ಟಿಯಾಗಿ ಇದ್ದೇವೆ. ಎಷ್ಟೇ ಆಮಿಷ ಒಡ್ಡಿದರೂ ಕೂಡ ನಾವು ಎಲ್ಲೂ ಹೋಗಲ್ಲ. ಹಿಂದೆ ಬಿಎಸ್ವೈ ಮಕ್ಕಳು ಸೇರಿಕೊಂಡು ದುಡ್ಡು ಮಾಡಿದ್ದರು'' ಎಂದರು.
ಶಾಸಕ ಗಣಿಗ ರವಿ ಮಾತನಾಡಿ, ''ಹಿಂದಿನ ಗ್ಯಾಂಗ್ ಮತ್ತೆ ಆ್ಯಕ್ಟಿವ್ ಆಗಿದೆ. ನಿಮ್ಮನ್ನು ಅಮಿತ್ ಶಾಗೆ ಭೇಟಿ ಮಾಡಿಸ್ತೇವೆ. ಚಾರ್ಟರ್ ಫ್ಲೈಟ್ ಬುಕ್ ಮಾಡಿದ್ದೇವೆ ಅಂತಾರೆ. ಎನ್.ಆರ್.ಸಂತೋಷ್ 10 ದಿನದ ಹಿಂದೆ ನಮ್ಮ ಶಾಸಕರನ್ನು ನಗರದ ಖಾಸಗಿ ಹೊಟೇಲ್ನಲ್ಲಿ ಭೇಟಿ ಮಾಡಿದ್ದರು. ಒಬ್ಬರು ಮೈಸೂರು ಭಾಗದ ಮಾಜಿ ಎಂಎಲ್ಸಿ, ಇನ್ನೊಬ್ಬರು ಬೆಳಗಾವಿಯ ಮಾಜಿ ಸಚಿವರು ಆಪರೇಷನ್ಗೆ ಮುಂದಾಗಿದ್ದಾರೆ. ಸಮಯ ಬರಲಿ ಎಲ್ಲವನ್ನೂ ಬಿಚ್ಚಿಡ್ತೇವೆ'' ಎಂದು ಹೇಳಿದರು.
ಇದನ್ನೂ ಓದಿ: 'ಕಾಂಗ್ರೆಸ್ ನಾಯಕರನ್ನು ಸೆಳೆದು ಕೋಟ್ಯಂತರ ರೂಪಾಯಿ ಆಮಿಷ': ಬಿಜೆಪಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು