ಬೆಂಗಳೂರು: ಲಾಕ್ ಡೌನ್ ವೇಳೆ ಜನರಿಗೆ ಅಗತ್ಯ ಸೇವೆ ಪೂರೈಕೆ ಮಾಡುವವರಿಗೆ ಆನ್ ಲೈನ್ ಮೂಲಕವೇ ಪಾಸ್ ವಿತರಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಈ ಮೊದಲು ಡಿಸಿಪಿ ಕಚೇರಿಗಳಲ್ಲಿ 12 ಸಾವಿರಕ್ಕೂ ಅಧಿಕ ಪಾಸ್ಗಳನ್ನು ವಿತರಣೆ ಮಾಡಲಾಗಿತ್ತು. ಆದರೆ ಪಾಸ್ ಕೌಂಟರ್ ಗಳ ಬಳಿ ಹೆಚ್ಚು ಮಂದಿ ಜಮಾವಣೆಯಾಗಿ ಕೊರೊನಾ ಸೊಂಕು ಹರಡುವ ಭೀತಿ ಎದುರಾಗಿದ್ದರಿಂದ ಮತ್ತು ಪಾಸ್ ದುರ್ಬಳಕೆಯಾಗುತ್ತಿರುವುದನ್ನು ಮನಗಂಡ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಮೈ ಗೇಟ್ ಡಾಟ್ ಕಾಮ್ ಸಹಯೋಗದಲ್ಲಿ ರಚನೆಯಾದ ಇ-ಪಾಸ್ ವಿತರಿಸಲು ಮುಂದಾಗಿದ್ದಾರೆ.
ಪಾಸ್ ಅಗತ್ಯ ಇದ್ದವರು ವೆಬ್ಸೈಟ್ನಲ್ಲಿ ಸ್ವ ವಿವರ ಉಲ್ಲೇಖಿಸಬೇಕು. ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದಾಗ ನಂಬರ್ ಗೆ ಒಟಿಪಿ ನಂಬರ್ ಬರಲಿದೆ. ಅಲ್ಲಿ ಕಂಪನಿಯ ವಿವರಗಳನ್ನು ಉಲ್ಲೇಖಿಸಬೇಕು, ನಂತರ ಇ-ಪಾಸ್ ಪಡೆಯಬಹುದಾಗಿದೆ. ಪಾಸ್ ಪಡೆಯುವವರ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ.