ಬೆಂಗಳೂರು: ಚುನಾವಣೆ ರಾಜಕೀಯಕ್ಕೆ ವಿದಾಯ ಘೋಷಿಸಿರುವ ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಬಿಜೆಪಿ ಹೈಕಮಾಂಡ್ ಬಯಸಿದರೆ ಚುನಾವಣೆ ರಾಜಕೀಯ ನಿವೃತ್ತಿ ನಿರ್ಧಾರ ಹಿಂದಕ್ಕೆ ಪಡೆಯುವ ಸುಳಿವನ್ನು ನೀಡಿದ್ದಾರೆ.
ಪಕ್ಷವು ಅಪೇಕ್ಷೆ ಪಟ್ಟರೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಸದಾನಂದಗೌಡರು ''ಈಟಿವಿ ಭಾರತ''ಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಿವೃತ್ತಿ ನಿರ್ಧಾರದ ಬಗ್ಗೆ ಲೊಕಸಭೆ ಸದಸ್ಯ ಸದಾನಂದಗೌಡರು ಸಂದರ್ಶನದಲ್ಲಿ ವ್ಯಕ್ತಪಡಿಸಿದ ಮನದಾಳದ ಮಾತುಗಳು ಇಲ್ಲಿವೆ.
ಪ್ರಶ್ನೆ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಿವೃತ್ತಿ ಘೋಷಣೆ ಮಾಡಿದ್ದನ್ನು ಮರು ಪರೀಕ್ಷೆ ಮಾಡುತ್ತೀರಾ?
ಉತ್ತರ: ಬಿಜೆಪಿ ಪಕ್ಷವು, ನನಗೆ ಎಲ್ಲ ಸ್ಥಾನಮಾನವನ್ನು ಕೊಟ್ಟಿದೆ. ಗ್ರಾಮೀಣ ಭಾಗದಿಂದ ಬಂದ ನನಗೆ ರಾಜ್ಯದಲ್ಲಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಸಚಿವ ಸ್ಥಾನ ಸೇರಿದಂತೆ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನೀಡಿದೆ. ನಾನು ಒಬ್ಬ ಸಂತೃಪ್ತ ರಾಜಕಾರಣಿ. ರಾಜಕಾರಣದಲ್ಲಿ 40 ವರ್ಷ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅವಕಾಶ ಸಿಗಬೇಕು ಎನ್ನುವ ಕಾರಣದಿಂದ ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿಯನ್ನು ಘೋಷಣೆ ಮಾಡಿದ್ದೇನೆ. ಆದರೆ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಾನು ಸಕ್ರಿಯವಾಗಿ ಇರುತ್ತೇನೆ. ನನ್ನ ಕ್ಷೇತ್ರದ ಕಾರ್ಯಕರ್ತರು ಬಿಜೆಪಿಯ ಪ್ರಮುಖ ಮುಖಂಡರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು ಶಾಸಕರು ಸೇರಿದಂತೆ ಹಲವಾರು ನಾಯಕರು ಕಳೆದ ಹತ್ತು ದಿನಗಳಲ್ಲಿ ಮನೆಗೆ ಬಂದು ಭೇಟಿ ಮಾಡಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸತೊಡಗಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ, ಶಾಂತಿ ಮತ್ತು ನೆಮ್ಮದಿ ತಂದಿದೆ, ನನ್ನ ಸ್ಪರ್ಧೆ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ, ಸ್ಪರ್ಧೆ ಬಗ್ಗೆ ನಾನು ಸದ್ಯಕ್ಕೆ ಮೌನ ವಹಿಸಿದ್ದೇನೆ.
ಪ್ರಶ್ನೆ: ಚುನಾವಣೆಗೆ ಸ್ಪರ್ಧಿಸಲು ನಿಮ್ಮ ಮೇಲೆ ಹೆಚ್ಚಿನ ಒತ್ತಡವಿರುವುದರಿಂದ ನಿವೃತ್ತಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುತ್ತೀರಾ.?
ಉತ್ತರ: ಈ ಬಗ್ಗೆ ನಾನಿನ್ನೂ ತೀರ್ಮಾನ ಮಾಡಿಲ್ಲ ಆಲೋಚನೆ ಸಹ ಮಾಡಿಲ್ಲ. ಹಲವಾರು ಜನರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಬೇಕು. ಕುಟುಂಬದವರ ಜೊತೆಗೂ ಸಹ ಆಲೋಚನೆ ಮಾಡಬೇಕು. ಪಕ್ಷ ಸುಪ್ರೀಂ, ಪಕ್ಷದ ಹೈಕಮಾಂಡ್ ಅಪೇಕ್ಷೆ ಪಟ್ಟರೆ ಅನಿವಾರ್ಯತೆ ಕಂಡುಬಂದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ನನ್ನ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡುತ್ತೇನೆ. ಪ್ರಧಾನಿ ಮೋದಿ ಅವರು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮೆಲ್ಲರ ಆಸೆಯಾಗಿದೆ. ಅದಕ್ಕಾಗಿ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ಸದ್ಯಕ್ಕೆ ಚುನಾವಣೆಯ ರಾಜಕೀಯ ನಿವೃತ್ತಿ ನಿರ್ಧಾರವನ್ನು ನಾನು ಬಾಕಿಯಿರಿಸಿದ್ದೇನೆ. ಒತ್ತಡವನ್ನು ತಿರಸ್ಕಾರ ಮಾಡುವುದಿಲ್ಲ, ಸ್ಪರ್ಧೆ ಬಗ್ಗೆ ಒಪ್ಪಿಯೂ ಇಲ್ಲ, ಸ್ಪರ್ಧಿಸುವುದಿಲ್ಲ ಅಂತ ಹೇಳುವುದೂ ಇಲ್ಲ. ಸದ್ಯ ತಟಸ್ಥ ನಿಲುವು ನನ್ನದಾಗಿದೆ.
ಪ್ರಶ್ನೆ: ಚುನಾವಣೆ ಸ್ಪರ್ಧೆ ಬಗ್ಗೆ ಕೊನೆ ಕ್ಷಣದಲ್ಲಿ ತೀರ್ಮಾನ ತೆಗೆದುಕೊಂಡರೆ ಚುನಾವಣೆ ಸಿದ್ಧತೆಗೆ ಸಮಯ ಎಲ್ಲಿ ಸಿಗುತ್ತೆ?
ಉತ್ತರ: ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತಂತೆ ಆರು ತಿಂಗಳ ಮೊದಲು ನನ್ನ ನಿರ್ಧಾರವನ್ನು ಪ್ರಕಟಿಸಿದ್ದೇನೆ. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಹೊಸಬರನ್ನು ಕ್ಷೇತ್ರದಲ್ಲಿ ಆಯ್ಕೆ ಮಾಡುವ ಉದ್ದೇಶದಿಂದಲೇ ನನ್ನ ತೀರ್ಮಾನವನ್ನು ಪ್ರಕಟಿಸಿದೆ. ಹಿರಿಯರಿಗೆ ಪಕ್ಷದಲ್ಲಿ ಏನು ತಿಳಿಸಬೇಕು ಅದನ್ನು ಹೇಳಿದ್ದೇನೆ. ಪಕ್ಷದ ತೀರ್ಮಾನದ ಮೇಲೆ ನನ್ನ ನಿವೃತ್ತಿ ನಿರ್ಧಾರ ವಾಪಾಸ್ಸು ಪಡೆಯುವುದು ಅವಲಂಬಿತವಾಗಿದೆ.
ಪ್ರಶ್ನೆ: ಸದಾನಂದ ಗೌಡರ ಕ್ಷೇತ್ರದ ಮೇಲೆ ಹಲವಾರು ಜನ ಸ್ಪರ್ಧಿಸಲು ಕಣ್ಣಿಟ್ಟಿದ್ದಾರೆ!
ಉತ್ತರ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಸತತವಾಗಿ ಗೆದ್ದುಕೊಂಡು ಬರುತ್ತಿದೆ. ಈ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನುಗಳಿಸುವ ಪ್ರಯತ್ನ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ ಈ ಕ್ಷೇತ್ರಕ್ಕೆ ಬರುವ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಮೆಟ್ರೋ ಯೋಜನೆ, ಕೆಂಪೇಗೌಡ ವಿಮಾನ ನಿಲ್ದಾಣ, ಸಬ್ ಅರ್ಬನ್ ರೈಲ್ವೆ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಅಧ್ಯಾಯ ಬರೆದಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ವರ್ಷದಲ್ಲಿ ಕನಿಷ್ಠ ನೂರು ಬಾರಿ ಭೇಟಿ ಕೊಟ್ಟಿದ್ದೇನೆ. ಜನಸಾಮಾನ್ಯರ ಕುಂದು ಕೊರತೆಗಳಿಗೆ ಪರಿಹಾರವನ್ನು ಒದಗಿಸಿದ್ದೇನೆ. ಎಲ್ಲರೂ ನನ್ನನ್ನು ಇಷ್ಟಪಡುತ್ತಾರೆ
ಪ್ರಶ್ನೆ: ಸದಾನಂದ ಗೌಡರ ಕ್ಷೇತ್ರದ ಮೇಲೆ ಮಂಡ್ಯ ಸಂಸದೆ ಸುಮಲತಾ, ಮಾಜಿ ಸಚಿವ ಸಿ.ಟಿ. ರವಿ, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಸೇರಿದಂತೆ ಹಲವರು ಸ್ಪರ್ಧೆ ಮಾಡಲು ಆಸಕ್ತಿ ವಹಿಸಿದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆಯಲ್ಲ?
ಉತ್ತರ: ಈ ಕ್ಷೇತ್ರದಲ್ಲಿ 14 ಜನರು ಅಭ್ಯರ್ಥಿಗಳಾಗಲು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ನೀವು ಹೇಳಿದ ಹೆಸರುಗಳಿವೆ. ಇವರಲ್ಲದೇ ಮಾಜಿ ಶಾಸಕರು, ಹಾಗೂ ಇತರರು ಸ್ಪರ್ಧೆ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆ ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ ಬಹಳ ಸುರಕ್ಷಿತ ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿಯಿಂದ ಸ್ಪರ್ದೆ ಮಾಡಿದರೆ ಗೆಲವು ಸುಲಭ ಎನ್ನುವುದು ಎಲ್ಲರಿಗೂ ತಿಳಿದಿದೆ.
ಪ್ರಶ್ನೆ: ನಿಮ್ಮ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದವರೆಲ್ಲಾ ಒಕ್ಕಲಿಗ ಸಮುದಾಯದವರೇ?
ಉತ್ತರ: ಹೆಚ್ಚಿನ ಆಕಾಂಕ್ಷಿಗಳು ಒಕ್ಕಲಿಗ ಸಮುದಾಯದವರೇ ಆಸಕ್ತಿ ತೋರಿದ್ದಾರೆ. 7 ರಿಂದ 8 ಜನ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಟಿಕೆಟ್ ಕೇಳುತ್ತಿದ್ದಾರೆ. ಉಳಿದವರು ಬೇರೆ ಸಮುದಾಯದವರಾಗಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಈ ಕ್ಷೇತ್ರದವರಿಗೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ.
ಇದನ್ನೂ ಓದಿ: ಹೆಗಡೆ ಪ್ರಚೋದನಾ ಹೇಳಿಕೆಯಿಂದ ಏನಾದರು ಘಟನೆ ನಡೆದರೆ ಅವರೇ ಜವಾಬ್ದಾರರು: ಗೃಹ ಸಚಿವ ಪರಮೇಶ್ವರ್