ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ನಗರಕ್ಕೆ ಡ್ರಗ್ಸ್ ಬರುತ್ತಿರುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಾದಕ ವಸ್ತುಗಳು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಬರಲು ಸಾಧ್ಯವೇ ಎನ್ನುವ ಅನುಮಾನ ಉಂಟಾಗಿದ್ದು, ಕಳೆದ 15 ದಿನಗಳಲ್ಲಿ ಎರಡು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲಗಳನ್ನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ನವೆಂಬರ್ 29 ರಂದು ಕೆನಡಾದಿಂದ ಗಾಂಜಾ ಚಾಕೋಲೇಟ್ ತರಿಸುತ್ತಿದ್ದ ಜಾಲವೊಂದು ಸಿಕ್ಕಿ ಬಿದ್ದಿತ್ತು ಮತ್ತು ನಿನ್ನೆ ನೆದರ್ಲ್ಯಾಂಡ್ನಿಂದ ಎಲ್ಎಸ್ಡಿ ಹಾಗೂ ಹೈಬ್ರೀಡ್ ಗಾಂಜಾ ಬೀಜ ತರಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅತೀಪ್ ಸಲೀಮ್, ಬಿಹಾರದ ಅಮಾತ್ಯ ರಿಷಿ, ಮಂಗಲ್ ಮುಕ್ಯ, ಹಾಗೂ ಬೆಂಗಳೂರಿನ ಅದಿತ್ಯ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ.
ಡಾರ್ಕ್ ವೆಬ್ ಮೂಲಕ ವಿದೇಶದಿಂದ ಕೊರಿಯರ್ ಮೂಲಕ ಹೈಬ್ರೀಡ್ ಗಾಂಜಾ ಬೀಜಗಳನ್ನು ತರಿಸಿಕೊಂಡು ಕೆಂಗೇರಿಯ ಅಪಾರ್ಟ್ ಮೆಂಟ್ನಲ್ಲಿ ಗಾಂಜಾ ಬೆಳೆಯುತ್ತಿದ್ದರು . ಈ ಪ್ರಕರಣವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದರು. ಮಾದಕ ವಸ್ತುಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವೇ ನಗರಕ್ಕೆ ಬರುತ್ತಿತ್ತು. ಈ ಹಿಂದೆ ಸ್ಮಗ್ಲಿಂಗ್ಗೆ ಸಹಾಯ ಮಾಡಿದ ಆರೋಪದಲ್ಲಿ ಕಸ್ಟಮ್ಸ್ನ ಹೆಚ್ಚುವರಿ ಪೊಲೀಸ್ ಆಯುಕ್ತರ ಮೇಲೆ ಸಿಬಿಐನಲ್ಲಿ ದೂರು ದಾಖಲಾಗಿತ್ತು. ಇದೀಗ ಎರಡು ವಿದೇಶಿ ಜಾಲಗಳು ಪತ್ತೆಯಾಗಿರುವುದು ಕಸ್ಟಮ್ಸ್ ಅಧಿಕಾರಿಗಳನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.