ಬೆಂಗಳೂರು: ನಗರದಲ್ಲಿ ಗಾಂಜಾ ಸೇರಿದಂತೆ ತರಹೇವಾರಿ ಡ್ರಗ್ಸ್ ಸರಬರಾಜು ಜಾಲ ವ್ಯಾಪಕವಾಗುತ್ತಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಪ್ರತ್ಯೇಕ ಮೂರು ಪ್ರಕರಣದಲ್ಲಿ ಇಬ್ಬರು ವಿದೇಶಿಯರು ಸೇರಿ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 6 ಕೋಟಿ ರೂ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಬಾಸ್ಟಿನ್, ಅಂಥೋನಿ, ರಾಮಣ್ಣ, ಇರ್ಫಾನ್, ಭಾಷ, ಮಹಮ್ಮದ್, ಇಲಿಯಾಸ್ ಎಂಬವರನ್ನು ಅರೆಸ್ಟ್ ಮಾಡಲಾಗಿದೆ. 2.5 ಕೆ.ಜಿ ಎಂಡಿಎಂಎ ಕ್ರಿಸ್ಟಲ್, 350 ಎಕ್ಸ್ಟಸಿ ಪಿಲ್ಸ್, 4 ಕೆ.ಜಿ ಹಾಶಿಶ್ ಆಯಿಲ್, 440 ಗ್ರಾಂ ಚರಸ್, 7 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೊತ್ತನೂರು, ಬಾಣಸವಾಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗೋವಾ, ದೆಹಲಿ, ಹೈದರಾಬಾದ್‌ಗಳಿಂದ ಮಾದಕ ವಸ್ತು ಖರೀದಿಸಿ ಯಾರಿಗೂ ಅನುಮಾನ ಬಾರದಂತೆ ಕೊತ್ತನೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಬಚ್ಚಿಟ್ಟಿದ್ದರು. ವ್ಯವಸ್ಥಿತ ಜಾಲದ ಮೂಲಕ ದುಪ್ಪಟ್ಟು ಬೆಲೆಗೆ ಡ್ರಗ್ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶ ಹೊಂದಿದ್ದರು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕೆ.ಪಿ ಅಗ್ರಹಾರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ: ತಿಂಗಳ ಬಳಿಕ ಪ್ರಮುಖ ಆರೋಪಿ ಬಂಧನ