ಬೆಂಗಳೂರು: ಈಗಾಗಲೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಿಂದ ವಿದೇಶಕ್ಕೆ ಡ್ರಗ್ಸ್ ಸಾಗಿಸುತ್ತಿದ್ದ ಜಾಲ ಭೇದಿಸಿರುವ ಕೇಂದ್ರ ಮಾದಕ ವಸ್ತು ನಿಯಂತ್ರಣ ವಿಭಾಗ (ಎನ್ಸಿಬಿ) ಬೆಂಗಳೂರು ಹಾಗೂ ಚೆನ್ನೈ ವಲಯಗಳ ಅಧಿಕಾರಿಗಳು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈದೀನ್ ಹಾಗೂ ಮೀರನ್ ಬಂಧಿತ ಆರೋಪಿಗಳು. ಬಂಧಿತರಿಂದ ಕೋಟ್ಯಂತರ ಮೌಲ್ಯದ ನಿಷೇಧಿತ ಮಾದಕ ವಸ್ತುವಾದ 49.35 ಕೆಜಿ ತೂಕದ ಮಾದಕ ವಸ್ತುವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಗೃಹಬಳಕೆ ವಸ್ತುಗಳ ಮೂಲಕ ಸಣ್ಣ-ಸಣ್ಣ ಪ್ಯಾಕೇಟ್ಗಳಲ್ಲಿ ಇದನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದರು. ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಿಂದ ವಿದೇಶಗಳಿಗೆ ಈ ಮಾದಕ ವಸ್ತುವನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ನೋವು ನಿವಾರಕ ಸೇರಿದಂತೆ ಹಲವು ರೀತಿಯ ಔಷಧಿಗಳ ತಯಾರಿಕೆಗೆ ಬಳಸುವ ಡ್ರಗ್ ಸಾಗಣೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಉದ್ದೇಶ ಹೊರತುಪಡಿಸಿ ಇತರ ಉದ್ದೇಶಗಳಿಗೆ ಇವುಗಳನ್ನು ಬಳಸಿದರೆ ಅದು 1985ರ ಮಾದಕ ವಸ್ತು ನಿಷೇಧಿತ ಕಾಯ್ದೆ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದೇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.