ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ ನಾನು ಈವರೆಗೂ ಮಾತನಾಡಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ನಗರದಲ್ಲಿ ರಾತ್ರಿಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಪಾರ್ಟಿಗಳು ನಡೆಯುತ್ತವೆ. ಅಲ್ಲಿಂದಲೇ ಡ್ರಗ್ಸ್ ಜಾಡು ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆ ಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರದ ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಬೆಳಗಿನವರೆಗೆ ಪಾರ್ಟಿಗಳು ನಡೆಯುತ್ತಿರುತ್ತವೆ. ಅನೇಕ ಹೆಣ್ಣುಮಕ್ಕಳು ರಸ್ತೆಯಲ್ಲಿ ಬಿದ್ದಿರುವುದನ್ನು ಜನ ನೋಡಿದ್ದಾರೆ. ಇನ್ನು ಮಲ್ಯ ರಸ್ತೆಯ ಮೈಕ್ರೋ ಬ್ರೀವರಿಸ್ ಯಾರದ್ದು?. ಸರ್ಕಾರದಲ್ಲಿರುವವರೇ ಈ ರೆಸ್ಟೋರೆಂಟ್‌ಗೆ ಹೂಡಿಕೆ ಮಾಡಿದ್ದಾರೆ. ಇದೆಲ್ಲವೂ ಹೊರಗೆ ಬರಬೇಕು. ಈ ಪ್ರಕರಣ 15 ದಿನಗಳಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಹೋಗಲಿದೆ ಎಂದು ಅಭಿಪ್ರಾಯಪಟ್ಟರು.
ಡಾನ್ಸ್ ಬಾರ್, ಬೆಟ್ಟಿಂಗ್ ಮಾಫಿಯಾಗಳು ಸರ್ಕಾರ ಬೀಳಿಸಲು ಕಾರಣ. ಹೀಗೆಂದು ನಾನು ಹೇಳಿಕೆ ನೀಡಿದ್ದು ನಿಜ. ಕ್ರಿಕೆಟ್ ಬೆಟ್ಟಿಂಗ್, ಡಾನ್ಸ್ ಬಾರ್ ಮುಚ್ಚಲು ಕ್ರಮ ಕೈಗೊಳ್ಳಲು ಮೈತ್ರಿ ಸರ್ಕಾರದಲ್ಲಿ ನಾನು ಸೂಚಿಸಿದ್ದೆ. ಅಧಿಕಾರಿಗಳು ದಾಳಿ ಮಾಡಲು ಆರಂಭಿಸಿದ್ದರು. ಆ ಸಂದರ್ಭದಲ್ಲಿ ಒಬ್ಬ ಶ್ರೀಲಂಕಾಗೆ ಓಡಿಹೋಗಿದ್ದ, ಆಮೇಲೆ ಬೇಲ್ ತೆಗೆದುಗೊಂಡು ಬಂದಿದ್ದ. ಆನಂತರ ಮುಂಬೈಗೆ ಶಾಸಕರು ಹೋದಾಗ ಅವರ ಜೊತೆ ಇದ್ದ ಫೋಟೋ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಈ ಡ್ಯಾನ್ಸ್ ಬಾರ್‌ಗಳಿಗೆ ಹಣ ಎಲ್ಲಿಂದ ಬರುತ್ತದೆ. ಡ್ರಗ್ಸ್ ಎಲ್ಲಿಂದ ದೊರೆಯುತ್ತಿದೆ. ಯಾರೆಲ್ಲ ಇದರ ಹಿಂದಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಬರೀ ಮೂರ್ನಾಲ್ಕು ಜನರನ್ನು ಹಿಡಿದುಕೊಂಡು ಎಳೆದಾಡಿದರೆ ಪ್ರಯೋಜನ ಆಗುವುದಿಲ್ಲ. ಎಲ್ಲದರ ಪ್ರಾಮಾಣಿಕ ತನಿಖೆ ಮಾಡದೇ ಇದ್ರೆ ಪ್ರಕರಣ ಸಧ್ಯದಲ್ಲೇ ಮುಚ್ಚಿ ಹೋಗುತ್ತದೆ ಎಂದು ಹೆಚ್ಡಿಕೆ ಹೇಳಿದರು.
ಈ ನೀಚ ಕೃತ್ಯಗಳಲ್ಲಿ ಬರೀ ರಾಜಕಾರಣಿಗಳು ಮಾತ್ರವಲ್ಲ, ಬಹಳಷ್ಟು ಜನ ಅಧಿಕಾರಿಗಳು ಕೂಡ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಹಾರಿಕೆ ಉತ್ತರ ಸಿಗುತ್ತದೆ ಅಷ್ಟೇ. ಅದರ ಬದಲಾಗಿ ರೈತರ ಸಮಸ್ಯೆ, ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಅಧಿಕಾರದಿಂದ ನನಗೆ ಮತ್ತು ಬರುವುದಿಲ್ಲ. ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ. ಮಲಗಿದ್ದರೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತಿತ್ತಾ? ಎಂದು ಸಚಿವ ಸಿ. ಟಿ. ರವಿ ಅವರಿಗೆ ಮತ್ತೊಮ್ಮೆ ತಿರುಗೇಟು ನೀಡಿದರು.
ಕಾಂಪಿಟ್ ವಿತ್ ಚೀನಾ ಎಂದು ನಾನು 9 ಉದ್ಯಮಗಳಿಗೆ ಚಾಲನೆ ನೀಡಿದ್ದೆ. ರಾಜ್ಯಕ್ಕೆ ನನ್ನದೇ ಆದ ಕೊಡುಗೆ ಕೊಟ್ಟಿದ್ದೇನೆ. ಸಾರಾಯಿ ಮತ್ತು ಲಾಟರಿ ನಿಲ್ಲಿಸಿದವನು ನಾನು. ಹೆಚ್. ವಿಶ್ವನಾಥ್ ಎಂತಹ ಅಭಿರುಚಿಯುಳ್ಳ ಮನುಷ್ಯ ಎಂದು ನನಗೆ ಗೊತ್ತಿದೆ. ಅವರ ಬಗ್ಗೆ ಚರ್ಚೆ ಮಾಡದಿರುವುದೇ ಒಳಿತು ಎಂದು ಹೆಚ್ಡಿಕೆ ಕಿಡಿಕಾರಿದರು.
ವಸತಿ ಸಚಿವ ವಿ. ಸೋಮಣ್ಣ ವಿಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾರೋ ಮನೆ ಕೇಳಿದ್ದಕ್ಕೆ ಮೈತ್ರಿ ಸರ್ಕಾರದಿಂದಾಗಿ ಹೌಸಿಂಗ್ ಡಿಪಾರ್ಟ್ಮೆಂಟ್ ಹಾಳಾಗಿದೆ ಅಂದಿದ್ದಾರೆ. ಏನಾಗಿದೆ ಅಂತಾ ದಾಖಲೆ ಕೊಡಿ ಅಂತಾ ಅಧಿವೇಶನದಲ್ಲಿ ಕೇಳುತ್ತೇನೆ. ಸಚಿವ ಸೋಮಣ್ಣ ಮನೆ ಕೇಳಿದ ವ್ಯಕ್ತಿಗೆ ಫೋನ್ ನಲ್ಲಿ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ನನ್ನ ಅವಧಿಯಲ್ಲಿ ನಾನೂ ವಸತಿ ಇಲಾಖೆಯಲ್ಲೂ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಇದೆಲ್ಲವನ್ನೂ ನಾನು ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಡಿಜೆ ಹಳ್ಳಿ ಘಟನೆ ಬಗ್ಗೆ ಚರ್ಚೆ ಮಾಡಿ ಪ್ರಯೋಜನಾ ಏನು ಇಲ್ಲ. ಶಾಸಕರೇ ಯಾಕೆ ಆಯ್ತು ಅಂತ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆ ಅಂತ ಹೇಳಿದ್ದಾರೆ. ತನಿಖೆ ಎಲ್ಲಿಗೆ ಬಂತು. ಕಾಂಗ್ರೆಸ್ ಅವರೇ ಇದರಲ್ಲಿ ಭಾಗಿಯಾದ್ದಾರೆ ಎಂಬುದು ಈಗಾಗಲೇ ಜಗತ್ ಜಾಹೀರಾಗಿದೆ ಎಂದು ಮಾಜಿ ಸಿಎಂ ಆರೋಪಿಸಿದರು.
ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಏನು ಪ್ರಯೋಜನ. ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದರೆ ದೇವರೇ ಸರ್ಕಾರವನ್ನು ಕಾಪಾಡಬೇಕು ಎಂದು ಟೀಕಿಸಿದರು.
ಅಭ್ಯರ್ಥಿ ಅಂತಿಮ: ಶಿರಾ ಉಪ ಚುನಾವಣೆಗೆ ಅಭ್ಯರ್ಥಿ ಹೆಸರು ಅಂತಿಮವಾಗಿದೆ. ಪಕ್ಷದಲ್ಲಿ ಚರ್ಚೆ ಮಾಡಿ ಮುಂದಿನ ವಾರ ಹೆಸರು ಘೋಷಿಸುತ್ತೇವೆ ಎಂದು ಹೆಚ್ಡಿಕೆ ಹೇಳಿದರು.
ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನ ನಿರುದ್ಯೋಗ ದಿನ ಅಭಿಯಾನ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಅಭಿನಂದನೆ ತಿಳಿಸುತ್ತೇನೆ. ಆದರೆ, ನಿರುದ್ಯೋಗದ ವಿಚಾರಕ್ಕೆ ಬಂದಾಗ, ಒಂದು ಕೋಟಿ ವಲಸಿಗರು ಉದ್ಯೋಗ ಇಲ್ಲದೇ ಬೀದಿಗೆ ಬಂದಿದ್ದಾರೆ. ಮೋದಿ ಆಡಳಿತದಲ್ಲಿ 20 ಕೋಟಿ ಜನ ಉದ್ಯೋಗ ಇಲ್ಲದೇ ಬೀದಿಗೆ ಬರುವಂತಾಗಿದೆ. ಇದರ ಜೊತೆಗೆ ದೇಶದ ಆರ್ಥಿಕ ಸ್ಥಿತಿ ಹೇಗಿದೆ. ಮೋದಿ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಮೋದಿಯವರ 70 ನೇ ವರ್ಷ ಹುಟ್ಟುಹಬ್ಬದಲ್ಲಾದ್ರೂ ದೇಶಕ್ಕೆ ಒಳ್ಳೇದಾಗಲೆಂದು ಆಶಿಸುತ್ತೇನೆ ಎಂದರು.