ಬೆಂಗಳೂರು : ಕೊನೆಗೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. 161 ತಾಲೂಕುಗಳನ್ನು ತೀವ್ರ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದ್ದು, ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಘೋಷಿಸಿ ಆದೇಶಿಸಲಾಗಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ (Ground Truthing) ವರದಿಯನುಸಾರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಮುಂಗಾರು ಪ್ರವೇಶ ಮತ್ತು ವ್ಯಾಪಿಸಲು ಸಾಮಾನ್ಯ ದಿನಾಂಕಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.56 ಮಳೆ ಕೊರತೆ ಉಂಟಾಗಿತ್ತು. ಜುಲೈ ತಿಂಗಳಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29ರಷ್ಟು ಹೆಚ್ಚು ಮಳೆಯಾಗಿದ್ದು, ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) 1-06-2023ರಿಂದ 19-08-2023ರ ಅವಧಿಯ ವರದಿಯಂತೆ ರಾಜ್ಯದಲ್ಲಿ 487 ಮಿ.ಮೀ. ಮಳೆಯಾಗಿದೆ. ವಾಡಿಕೆ ಮಳೆ (635 ಮಿ.ಮೀ)ಗೆ ಹೋಲಿಸಿದಾಗ ಶೇ.23ರಷ್ಟು ಕೊರತೆ ಇದೆ. ಬರ ಘೋಷಣೆಗೆ ಕಡ್ಡಾಯ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿದಾಗ ಒಟ್ಟಾರೆ 113 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿತ್ತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳು 113 ತಾಲೂಕುಗಳ 1,519 ಗ್ರಾಮಗಳಲ್ಲಿ ಬೆಳೆ ಹಾನಿ ಕ್ಷೇತ್ರ ದೃಢಿಕರಣ ಕಾರ್ಯ ನಡೆಸಿದ್ದರು. ಅದರಂತೆ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ 62 ತಾಲೂಕುಗಳನ್ನು ತೀವ್ರ ಬರ ಹಾಗೂ 33% - 50% ರಷ್ಟು ಬೆಳೆ ನಷ್ಟ ವರದಿ ಮಾಡಿರುವ 51 ತಾಲೂಕುಗಳು ಸಾಧಾರಣ ಬರ ಎಂದು ವರ್ಗೀಕರಿಸಲಾಗಿತ್ತು.
1-6-2023ರಿಂದ 2-09-2023ರ ಅವಧಿಯಲ್ಲಿ ರಾಜ್ಯದಲ್ಲಿ 512 ಮಿ.ಮಿ ಮಳೆಯಾಗಿದ್ದು, ವಾಡಿಕೆ ಮಳೆ (701ಮಿ.ಮೀ)ಗೆ ಹೋಲಿಸಿದಾಗ ಶೇ.27ರಷ್ಟು ಮಳೆ ಕೊರತೆ ಇತ್ತು. ಬರ ಮಾನದಂಡಗಳನ್ನು ಪರಿಗಣಿಸಿ ಹೊಸದಾಗಿ 83 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ ತಾಲೂಕುಗಳೆಂದು KSNDMC ಸಂಸ್ಥೆ ವರದಿ ನೀಡಿತ್ತು. ಬಳಿಕ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈಗಾಗಲೇ ಸಾಧಾರಣ ಬರವೆಂದು ಗುರುತಿಸಲಾದ 51 ತಾಲೂಕುಗಳ ಜೊತೆಗೆ ಹೊಸದಾಗಿ 83 ತಾಲೂಕುಗಳು ಸೇರಿ 134 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಸೂಚಿಸಲಾಗಿತ್ತು. ಬಳಿಕ ಬಂದ ವರದಿಯಂತೆ ಸಾಧಾರಣವೆಂದು ಗುರುತಿಸಲಾದ 51 ತಾಲೂಕುಗಳಲ್ಲಿ ಹಾನಿ ಕ್ಷೇತ್ರ ದೃಢೀಕರಣ ಕೈಗೊಂಡ ನಂತರ 41 ತಾಲೂಕುಗಳು ತೀವ್ರ ಬರ ಹಾಗೂ ಉಳಿದ 10 ತಾಲೂಕುಗಳು ಸಾಧಾರಣ ಬರ ವರ್ಗದಲ್ಲಿ ಗುರುತಿಸಲ್ಪಟ್ಟಿವೆ.
ಒಟ್ಟಾರೆ, ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ. ಈ ಎಲ್ಲಾ ತಾಲೂಕುಗಳಲ್ಲಿ ಬೆಳೆಹಾನಿ ಸಮೀಕ್ಷೆ ಕೈಗೊಂಡ ನಂತರ ಅಂತಿಮವಾಗಿ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮುಂಗಾರು ಕೊರತೆ : ಬರ ಘೋಷಣೆಗಾಗಿ ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ