ಬೆಂಗಳೂರು: ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮತ್ತು ಸಚಿವರು ಅವರನ್ನು ಸ್ವಾಗತಿಸಲಿದ್ದಾರೆ.
ಬಳಿಕ ಸಂಜೆ 4 ಗಂಟೆಗೆ ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‍ನಲ್ಲಿ ನಡೆಯುವ ಸಂಸದರು, ಸಚಿವರು ಮತ್ತು ಶಾಸಕರ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲಿ ಮತಯಾಚನೆ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಪ್ರಲ್ಹಾದ ಜೋಶಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದ್ದೂರಿ ಸ್ವಾಗತಕ್ಕೆ ಸಿದ್ಧತೆ: ದ್ರೌಪದಿ ಮುರ್ಮು ಅವರು ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಕೋಲಾಟ ಸೇರಿದಂತೆ 20 ಆದಿವಾಸಿ ಕಲಾತಂಡಗಳಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ನಿರ್ಣಯಿಸಲಾಗಿದೆ.
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ 2,500 ಮಹಿಳೆಯರು ಶಾಂಘ್ರಿಲಾ ಹೋಟೆಲ್ ಬಳಿ ಸೇರಿ ಅವರನ್ನು ಸ್ವಾಗತಿಸಲು ನಿರ್ಧರಿಸಲಾಗಿದೆ.