ಬೆಂಗಳೂರು : ನಾಗರಿಕರು ಚುನಾವಣಾ ಪ್ರಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಜಾರಿಗೆ ತಂದಿರುವ ಚುನಾವಣಾ ಸುಧಾರಣೆಗಳಿಗೆ ದೇಶಾದ್ಯಂತ ಚಾಲನೆ ನೀಡಲಾಗಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದರು.
ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಸುಧಾರಣೆಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಚುನಾವಣಾ ಸುಧಾರಣೆಗಳ ಕುರಿತು ರಾಜ್ಯದ ಜನತೆಗೆ ಅರಿವು ಮೂಡಿಸಬೇಕು. ಮೊದಲು ಸರ್ಕಾರಿ ನೌಕರರಾದ ನಾವು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಬೇಕು. ನಂತರ ಜನತೆಗೆ ಪ್ರಚಾರ ಮಾಡಬೇಕು. ಆಧಾರ್ ಜೋಡಣೆಯಾದರೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ. ಮತದಾನ ನಮ್ಮ ಕರ್ತವ್ಯವಾಗಿದ್ದು, ಮತದಾನ ಮಾಡಲು ಪ್ರೇರಣೆ ಮಾಡಬೇಕು ಎಂದು ಹೇಳಿದರು.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, ಚುನಾವಣಾ ಸುಧಾರಣೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಮೊದಲಿನಂತೆ ಜನವರಿ 1ರ ವರೆಗೂ ಹಾಗೂ 18 ವರ್ಷ ತುಂಬಿದ ನಂತರ ಸೇರ್ಪಡೆ ಮಾಡಲು ಕಾಯುವಂತಿಲ್ಲ. 17 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಮತದಾರರ ನೋಂದಣಿ ಸರಳೀಕರಣ : ಆಗಸ್ಟ್ 1, 2022 ರಿಂದ ಮತದಾರರ ನೋಂದಣಿಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳು ಲಭ್ಯವಿದ್ದು, ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ಹೊಸ ನಮೂನೆ 8 ಲಭ್ಯವಿದೆ. ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತ ಆಧಾರ್ ಜೋಡಣೆ ಸೌಲಭ್ಯ ಕಲ್ಪಿಸಲಾಗಿದೆ.
ಒಂದೇ ತರಹದ ಹೆಸರು-ಫೋಟೋ ನಮೂದುಗಳನ್ನು ಹೊಂದಿರುವ ಮತದಾರರ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ. ಮತದಾರರ ಪಟ್ಟಿಯನ್ನು ಖಾತರಿಪಡಿಸುವ ಉದ್ದೇಶದಿಂದ ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆಯನ್ನು ಆಗಸ್ಟ್ ನಿಂದ ಪ್ರಾರಂಭಿಸಲಾಗುವುದು ಎಂದರು.
ಪ್ರಸ್ತುತ ಜಾರಿಯಲ್ಲಿರುವ ಜನವರಿ 01ರ ಅರ್ಹತಾ ದಿನಾಂಕದ ಜೊತೆಗೆ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ ರಂದು ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದೆ ಮತದಾರರ ಪಟ್ಟಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸಲಾಗುವುದು. ಇದರಿಂದ ಆ ತ್ರೈಮಾಸಿಕದಲ್ಲಿ 18 ವರ್ಷ ತುಂಬುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜೊತೆಗೆ ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಸಹ ವಿತರಿಸಲಾಗುವುದು.
ಪ್ರಸಕ್ತ 2023ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ 2022 ಕ್ಕೆ 18 ವರ್ಷ ತುಂಬುವ ಯುವ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಮೊದಲು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ವರ್ಗಾವಣೆಗಾಗಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದನ್ನು ಪರಿಷ್ಕರಿಸಿ ನಮೂನೆ-6 ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದರು.
ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8 ಎ ಯನ್ನು ರದ್ದುಪಡಿಸಲಾಗಿದೆ. ನಮೂನೆ -8ಎ ರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ ನಮೂನೆ-8 ರಲ್ಲಿ ಒದಗಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಿದ್ದು, ಅಕಸ್ಮಾತ್ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮುಂದೆ ಸೂಚಿಸಿರುವ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ ಆಗಸ್ಟ್ 01,2022 ರಿಂದ ಮಾರ್ಚ್ 31, 2023 ರೊಳಗೆ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮತದಾರರ ಪಟ್ಟಿ ವಾರ್ಷಿಕ ಸಂಕ್ಷಿಪ್ತ ಪರಿಷ್ಕರಣೆ : ಭಾರತ ಚುನಾವಣಾ ಆಯೋಗವು ಜನವರಿ 01, 2023 ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ. ಈ ಪ್ರಕ್ರಿಯೆಯಡಿ ಆಗಸ್ಟ್ 04, 2022 ರಿಂದ ಅಕ್ಟೋಬರ್ 24, 2022ರ ಅವಧಿಯಲ್ಲಿ ಪೂರ್ವ ಪರಿಷ್ಕರಣಾ ಚಟುವಟಿಕೆಗಳನ್ನು ಮಾಡಲಾಗುವುದು.
ಒಂದು ಮತಗಟ್ಟೆಯಲ್ಲಿ 1,500 ಕ್ಕಿಂತ ಹೆಚ್ಚು ಮತದಾರರಿದ್ದಲ್ಲಿ ವಿಭಜಿಸಿ ಹೊಸ ಮತಗಟ್ಟೆ ಸ್ಥಾಪನೆ, ಒಂದು ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿನ ಸೆಕ್ಷನ್‍ಗಳನ್ನು ಬದಲಾವಣೆ ಅವಶ್ಯವಿದ್ದಲ್ಲಿ ವಿಭಾಗಗಳನ್ನು ಸರಿಪಡಿಸುವುದು. ನವೆಂಬರ್ 09, 2022 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ನವೆಂಬರ್ 9,2022 ರಿಂದ ಡಿಸೆಂಬರ್ 08, 2022ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕ್ಲೇಮ್ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ತಕರಾರು ಸಲ್ಲಿಸಲು ಅವಕಾಶವಿದೆ.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರು ಚುನಾವಣಾ ಸಂದೇಶ ಬಿಡುಗಡೆ ಮಾಡಿದರು. ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಚುನಾವಣಾ ಸುಧಾರಣೆಗಳು ಕುರಿತ ಸಂದೇಶವನ್ನು ಹಾಗೂ ಜಂಟಿ ಮುಖ್ಯ ಚುನಾವಣಾಧಿಕಾರಿ ಶಂಭು ಭಟ್ ಅವರು ವೋಟರ್ ಹೆಲ್ಪ್ ಲೈನ್ ಆ್ಯಪ್ನ್ನು ಇದೇ ವೇಳೆ ಬಿಡುಗಡೆ ಮಾಡಿದರು.
ಓದಿ : ಇಂದು ED ಕೋರ್ಟ್ ಜಾಮೀನು ತೀರ್ಪು ಹಿನ್ನೆಲೆ: ದೆಹಲಿಗೆ ತೆರಳಿದ ಡಿಕೆಶಿ