ಬೆಂಗಳೂರು: 'ಡ್ರೈವ್-ಇನ್-ಸ್ವ್ಯಾಬ್' ಸಂಗ್ರಹಣಾ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರಲಾಗುವುದು. ಇದರ ಜತೆಗೆ, ಮನೆಮನೆಗೂ ತೆರಳಿ ತಪಾಸಣೆ ನಡೆಸಲಾಗುವುದು. ಕೋವಿಡ್ ಹಾಗೂ ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲು 24X7 ಕಾಲವಧಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುವ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸೂಚಿಸಿದ್ದಾರೆ.
ಕೊರೊನಾ ಮತ್ತು ಒಮಿಕ್ರಾನ್ ಸೋಂಕು ಹೆಚ್ಚಳದಿಂದ ಉಂಟಾಗಲಿರುವ ಪರಿಸ್ಥಿತಿಯನ್ನು ಎದುರಿಸಲು ಇರುವ ವ್ಯವಸ್ಥೆ ಮತ್ತು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ಸಂಬಂಧಿಸಿದ ಅರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ನಂತರ, ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ, ಆಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆಯಿದ್ದು, ಈ ಸಂಬಂಧ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಇದಕ್ಕೆ ತಾವು ಕ್ಷಿಪ್ರವಾಗಿ ಅನುಮೋದನೆ ಕೊಡಿಸುವುದಾಗಿ ಅವರು ಹೇಳಿದರು.
ಲೈಫ್ ಸೈನ್ಸ್ ಡಯಾಗ್ನೋಸ್ಟಿಕ್ ಸೆಂಟರ್' ಸಂಸ್ಥೆಯೊಂದಿಗೆ ಒಡಂಬಡಿಕೆ:
ಕೋವಿಡ್ 2ನೇ ಅಲೆ ತೀವ್ರವಾಗಿದ್ದಾಗ ಸಹಾಯವಾಣಿ ಮತ್ತು ವಾರ್ ರೂಂ ಸ್ಥಾಪಿಸಲಾಗಿತ್ತು. ಈಗ ಪುನಃ ಇವು ಕಾರ್ಯಾರಂಭ ಮಾಡಲಿವೆ. ಜತೆಗೆ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಸೋಂಕು ಕಂಡುಬಂದವರಿಗೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಅಗತ್ಯ. ಇದಕ್ಕಾಗಿ, 'ಲೈಫ್ ಸೈನ್ಸ್ ಡಯಾಗ್ನೋಸ್ಟಿಕ್ ಸೆಂಟರ್' ಸಂಸ್ಥೆಯೊಂದಿಗೆ ವಿಳಂಬ ಮಾಡದೆ ಒಡಂಬಡಿಕೆ ಮಾಡಿಕೊಳ್ಳಬೇಕು. ಹಾಗೆಯೇ, ಆಸ್ಪತ್ರೆಗೆ ದಾಖಲಾಗುವವರಿಗೆ ಪೌಷ್ಟಿಕ ಆಹಾರ ಪೂರೈಸಲು ಹಿಂದಿನಂತೆ ಈ ಬಾರಿಯೂ ಇಸ್ಕಾನ್ ಸಂಸ್ಥೆಯೊಂದಿಗೆ ಸೂಕ್ತ ವ್ಯವಸ್ಥೆ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆಗಳ ಸಾಮರ್ಥ್ಯದ ಮಕ್ಕಳ ಚಿಕಿತ್ಸಾ ಕಟ್ಟಡ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ 60 ಹಾಸಿಗೆಗಳ ಸಾಮರ್ಥ್ಯದ ಕಟ್ಟಡಗಳ ಕಾಮಗಾರಿಯನ್ನೂ ಪರಿಶೀಲಿಸಿ, ತ್ವರಿತವಾಗಿ ಮುಗಿಸುವಂತೆ ಹೇಳಿದರು.
ಆಕ್ಸಿಜನ್, ಐಸಿಯು, ವೆಂಟಿಲೇಟರ್ ಸೌಲಭ್ಯ ಸಜ್ಜು:
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 106 ಹಾಸಿಗೆಗಳ ಸಾಮರ್ಥ್ಯದ ವೆಂಟಿಲೇಟರ್‌ಸಹಿತ ವಾರ್ಡ್, 11 ಹಾಸಿಗೆಗಳಿರುವ ಹೆಚ್ಎಫ್ಎನ್ಸಿ ಆಕ್ಸಿಜನ್ ವ್ಯವಸ್ಥೆ ಸಹಿತ ವಾರ್ಡ್, 60 ಹಾಸಿಗೆಗಳ ಹೆಚ್ಇ ಮಾನಿಟರ್ ಸಹಿತ ಸ್ಟೆಪ್-ಡೌನ್ ಐಸಿಯು ವಾರ್ಡ್ ಸಿದ್ಧಗೊಂಡಿದೆ. ಇದರೊಂದಿಗೆ, ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ 30 ಹಾಸಿಗೆಗಳ ಸ್ಟೆಪ್-ಡೌನ್ ಐಸಿಯು ವಾರ್ಡ್, ಮಕ್ಕಳ ಚಿಕಿತ್ಸೆಗೆಂದು 15 ಸಿ-ಟ್ಯಾಪ್ ಯಂತ್ರಸಹಿತ ವಾರ್ಡ್ ಮತ್ತು ಹೈಟೆಕ್ ಪ್ರಯೋಗಾಲಯ ಇದೆ ಎಂದು ಇದೇ ವೇಳೆ ಸಚಿವ ಅಶ್ವತ್ಥ್ ನಾರಾಯಣ ವಿವರಿಸಿದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 3,000 ಪಲ್ಸ್ ಆಕ್ಸಿಮೀಟರ್ ಬ್ಯಾಂಕ್, 200 ಕಾಂಟ್ಯಾಕ್ಟ್ ಲೆಸ್ ಮಾನಿಟರ್ಗಳು, 100 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಮತ್ತು 200 ಹೋಮ್ ಐಸೋಲೇಷನ್ ಆಕ್ಸಿಜನ್ ಕಾನ್ಸಂಟ್ರೇಟರ್ಗಳಿವೆ. ಸೋಂಕು ಕಂಡುಬಂದು, ಮನೆಯಲ್ಲೇ ಪ್ರತ್ಯೇಕ ವಾಸವಿರುವವರಿಗೆ ಆಮ್ಲಜನಕ ಪೂರೈಕೆ ಅಗತ್ಯವಿದ್ದರೆ, ಅಂಥವರಿಗೆ ಈ ಹೋಮ್ ಐಸೋಲೇಷನ್ ಕಾನ್ಸಂಟ್ರೇಟರ್ಗಳನ್ನು ತಕ್ಷಣ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಮೇಲ್ವಿಚಾರಣಾ ಮುಖ್ಯಸ್ಥ ಉಜ್ವಲ್ ಘೋಷ್, ಪಶ್ಚಿಮ ವಲಯದ ಆಯುಕ್ತ ದೀಪಕ್, ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಫೋಟ: ಫೆ.15ರವರೆಗೆ ಶಾಲಾ-ಕಾಲೇಜ್ ಕ್ಲೋಸ್