ಬೆಂಗಳೂರು : ನಿಮ್ಹಾನ್ಸ್ ಕಾರ್ಯಕ್ರಮದ ನನ್ನ ಭಾಷಣದ ಒಂದು ಭಾಗವನ್ನು ನೈಜವಾದ ಉದ್ದೇಶದಿಂದ ಹೊರಗೆಳೆದು ಅಪಾರ್ಥ ಕಲ್ಪಿಸಲಾಗಿದೆ ಎಂದು ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಾಷಣದ ವ್ಯಾಪಕವಾದ ಅರ್ಥವನ್ನು ಸಂಕೀರ್ಣಗೊಳಿಸಲಾಗಿದೆ ಎಂದಿದ್ದಾರೆ.
ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕವನ್ನು ಜಗತ್ತು ಎದುರಿಸುತ್ತಿರುವ ಸಮಯದಲ್ಲಿ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಅಕ್ಟೋಬರ್ 10ರ ಭಾನುವಾರದಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆಯಾಯಿತು. ಸಾಂಕ್ರಾಮಿಕದಿಂದ ತಮ್ಮವರನ್ನು ಕಳೆದುಕೊಂಡಿರುವುದು, ಒಂಟಿತನ, ಆರ್ಥಿಕ ನಷ್ಟ, ಆತಂಕ ಮೊದಲಾದ ಕಾರಣಗಳಿಂದ ಜನರಲ್ಲಿ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಹೆಚ್ಚಾಗಿದೆ. ಅದರಲ್ಲೂ ಯುವಜನಾಂಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ.
ನಿಮ್ಹಾನ್ಸ್ ಕಾರ್ಯಕ್ರಮದ ನನ್ನ ಭಾಷಣದಲ್ಲಿ ಈ ಮಾನಸಿಕ ಸಮಸ್ಯೆ, ಸವಾಲುಗಳನ್ನು ಭಾರತದ ಕೌಟುಂಬಿಕ ಮೌಲ್ಯಗಳ ಮೂಲಕ ಹೇಗೆ ನಿವಾರಿಸಬಹುದು ಎಂಬ ಸಂದೇಶವನ್ನು ನೀಡಬೇಕೆಂಬ ಉದ್ದೇಶ ಹೊಂದಿದೆ.
ನಾನು ಒಬ್ಬ ಹೆಮ್ಮೆಯ ಹೆಣ್ಣುಮಗಳ ತಂದೆ ಹಾಗೂ ಸಂಪೂರ್ಣ ವೃತ್ತಿಪರ ತರಬೇತಿ ಪಡೆದ ವೈದ್ಯ ಎಂದು ಮೊದಲಿಗೆ ಹೇಳುತ್ತೇನೆ. ಆದ್ದರಿಂದ ಮಹಿಳೆಯರ ಸುತ್ತಲಿನ ಸೂಕ್ಷ್ಮತೆಗಳನ್ನು, ಸಂವೇದನೆಗಳನ್ನು ಸಂಪೂರ್ಣವಾಗಿ ಅರಿತಿದ್ದೇನೆ ಹಾಗೂ ನಾವು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ.
ಮಾನಸಿಕ ಆರೋಗ್ಯದ ಸವಾಲುಗಳನ್ನು ಪರಿಹರಿಸುವ ಸೌಲಭ್ಯಗಳ ಕೊರತೆ ಇರುವ ಕಡೆಗಳಲ್ಲಿ ಕುಟುಂಬಗಳು ವ್ಯಕ್ತಿಗೆ ಮೌಲ್ಯಯುತ ವ್ಯವಸ್ಥೆಯನ್ನು ಸೃಷ್ಟಿಸಿ ಕೊಡುತ್ತದೆ ಎಂಬುದು ಸಂಶೋಧನೆ ಹಾಗೂ ಅಧ್ಯಯನಗಳಿಂದ ಸಾಬೀತಾಗಿದೆ. ಇದು ವ್ಯಕ್ತಿಯ ವಿವಿಧ ಮಾನಸಿಕ ಒತ್ತಡಗಳನ್ನು ನಿರ್ವಹಣೆ ಮಾಡಲು ಸಹಾಯಕವಾಗುತ್ತದೆ.
ಭಾರತೀಯ ಸಮಾಜವು ಪರಸ್ಪರ ಅವಲಂಬನೆ, ಸಾಮಾಜಿಕ ಒಗ್ಗಟ್ಟು, ಸಾಮೂಹಿಕತೆಯಿಂದ ಕೂಡಿದೆ. ಭಾರತದ ಸಾಂಪ್ರದಾಯಿಕ ಅವಿಭಕ್ತ ಕುಟುಂಬವು ಸಾಮೂಹಿಕತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಹಾಗೂ ಇದು ಮಾನಸಿಕ ಆರೋಗ್ಯ ಸಮಸ್ಯೆಗೊಳಗಾದವರ ಆರೈಕೆಗೆ ಸೂಕ್ತ ಸೌಲಭ್ಯ ಒದಗಿಸುತ್ತದೆ.
ಪಶ್ಚಿಮದ ದೇಶಗಳ ಸಮಾಜವು ವಿಭಕ್ತ ವ್ಯವಸ್ಥೆಯನ್ನು ಉತ್ತೇಜಿಸಿದರೆ, ಭಾರತೀಯ ಸಮಾಜವು ಸಾಮೂಹಿಕತೆ, ಪರಸ್ಪರ ಅವಲಂಬನೆ ಪ್ರೋತ್ಸಾಹಿಸುತ್ತದೆ. ಆದ್ದರಿಂದ, ಭಾರತೀಯ ಹಾಗೂ ಏಷ್ಯಾದ ಕುಟುಂಬಗಳು, ಸದಸ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಇದರಿಂದಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚು ಆರೋಗ್ಯದ ಹೊರೆಯನ್ನು ಹೊತ್ತುಕೊಳ್ಳುತ್ತದೆ. ಭಾರತೀಯ ಕುಟುಂಬಗಳು ತಮ್ಮ ರೋಗಿಗಳ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುತ್ತದೆ ಹಾಗೂ ಆರೈಕೆಯಲ್ಲೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತದೆ.
ಈ ಅಂಶವು ಕೆಳಕಂಡ ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ.
https://www.ncbi.nlm.nih.gov/pmc/articles/PMC3705700/
ಯುವಜನರಲ್ಲಿ ಮದುವೆಗೆ ನಿರಾಕರಣೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಹಿಂಜರಿಕೆಗೆ ಸಂಬಂಧಿಸಿದ ನನ್ನ ಹೇಳಿಕೆ ಕೂಡ ಸರ್ವೆಯೊಂದನ್ನು ಆಧರಿಸಿದ ಹೇಳಿಕೆಯಾಗಿದೆ. YouGov-Mint-CPR Millennial Survey ಪ್ರಕಾರ, ಹೊಸ ಪೀಳಿಗೆಯಲ್ಲಿ (ಮಿಲೆನಿಯಲ್ಸ್) ಶೇ.19ರಷ್ಟು ಮಂದಿ ಮದುವೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಆಸಕ್ತಿ ಹೊಂದಿಲ್ಲ.
ಇನ್ನೂ ಶೇ.8ರಷ್ಟು ಮಂದಿ ಮಕ್ಕಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ, ವಿವಾಹಕ್ಕೆ ಸಿದ್ಧರಾಗಿಲ್ಲ. ನಂತರದ ಪೀಳಿಗೆಯಲ್ಲಿ (ಪೋಸ್ಟ್ ಮಿಲೆನಿಯಲ್ಸ್-ಜನರೇಶನ್ ಝೆಡ್) ಶೇ.23ರಷ್ಟು ಮಂದಿ ವಿವಾಹ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಟ್ರೆಂಡ್‌ನಲ್ಲಿ ಲಿಂಗ ಆಧಾರಿತವಾಗಿ ಕೆಲ ವ್ಯತ್ಯಾಸಗಳಿವೆ. ಇದು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸಂಬಂಧಿಸಿದೆ.
ಅದ್ಭುತವಾದ ಬೆಂಬಲ ನೀಡುವಂತಹ ವಾತಾವರಣ ಹೊಂದಿರುವ ನಮ್ಮ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ, ಉದ್ವೇಗ, ಖಿನ್ನತೆಗೆ ನಮ್ಮ ಯುವಜನತೆ ಪರಿಹಾರ ಪಡೆಯಬಹುದು ಎಂಬುದು ಮಾತ್ರ ನನ್ನ ಮಾತಿನ ಮುಖ್ಯ ಉದ್ದೇಶವಾಗಿತ್ತು.
ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ಉದ್ದೇಶಿಸಿ ನಾನು ಅಂತಹ ಹೇಳಿಕೆಯನ್ನು ನೀಡಿಲ್ಲ. ನನ್ನ ಮಾತು ಅಂತಹ ಉದ್ದೇಶವನ್ನು ಹೊಂದಿರಲೇ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಜೊತೆಗೆ ಪ್ರತಿಯೊಬ್ಬರೂ ಕೆಳಕಂಡ ಫೇಸ್ಬುಕ್ ಪೇಜ್ನಲ್ಲಿ ಲಭ್ಯವಿರುವ ನನ್ನ ಭಾಷಣವನ್ನು ಸಂಪೂರ್ಣವಾಗಿ ಆಲಿಸಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="">
ಓದಿ: ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ, ಮದುವೆಯಾದರೂ ಮಗುವಿಗೆ ಜನ್ಮ ನೀಡಲು ನಿರಕಾರಿಸುತ್ತಿದ್ದಾರೆ : ಸಚಿವ ಡಾ. ಸುಧಾಕರ್