ಬೆಂಗಳೂರು: ವೃತ್ತಿ ಆಧರಿತ ಕೌಶಲ್ಯ ಹೊಂದಿರುವಂತಹ ವಿಶ್ವಕರ್ಮ ಜನಾಂಗದವರ ವಿದ್ಯೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಸರ್ಕಾರ ಗಮನಹರಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಪೌರತ್ವ ತಿದುದ್ದಪಡಿ ಕಾಯಿದೆ ಕುರಿತಂತೆ ಜನಜಾಗೃತಿ ಮೂಡಿಸಲು ಸರ್ಕಾರ ಹಮ್ಮಿಕೊಂಡಿರುವ ಮನೆ ಮನೆ ಸಂಪರ್ಕ ಅಭಿಯಾನದ ಭಾಗವಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಜ್ಞಾನ ಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರರ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, "ವೃತ್ತಿ ಆಧಾರಿತ, ಕೌಶಲ್ಯ ಇರುವ ವಿಶ್ವಕರ್ಮ ಸಮುದಾಯದವರ ವಿದ್ಯೆಯನ್ನು ಮುಂದಿನ ಪೀಳಿಗೆಯವರು ಕಲಿಯುವಂತಾಗಬೇಕು. ಈ ಸಂಬಂಧ ಕಂಬಾರರ ಸಲಹೆ ಅತ್ಯುತ್ತಮವಾಗಿದ್ದು, ಅದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುವುದು"ಎಂದು ಉಪಮುಖ್ಯಮಂತ್ರಿ ಹೇಳಿದರು.
ಈ ನೆಲದ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಸ್ಥೆ ಅಥವಾ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಕಂಬಾರರ ಮಾರ್ಗದರ್ಶನ ಪಡೆಯಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಈ ಯೋಜನೆಗೆ ಒತ್ತು ನೀಡಿ, ಪ್ರೋತ್ಸಾಹ ನೀಡುವರು. ಕೌಶಲ್ಯ ಕಲಿಕೆ ಬಹಳ ಮಹತ್ವದ ವಿಚಾರವಾದ್ದರಿಂದ ಕೂಡಲೇ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಡಾ.ಚಂದ್ರಶೇಖರ ಕಂಬಾರರು, ಕರಕುಶಲ ಕಲೆಗೆ ಈ ಸರ್ಕಾರ ಹೆಚ್ಚು ಒತ್ತು ಕೊಡುತ್ತಿದೆ. ಇಂಥ ವಿದ್ಯೆಗಳ ಕಲಿಕೆಗೆ ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ನನ್ನ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯ ಪೂರಕವಾಗಿ ಸ್ಪಂದಿಸಿದ್ದು ನನಗೆ ಖುಷಿ ತಂದಿದೆ ಎಂದು ತಿಳಿಸಿದರು.