ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಂಜೆ ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಪಿಎಸ್ಐ ನೇಮಕಾತಿಯಲ್ಲಿ ಭಾರಿ ಹಗರಣ ಆಗಿತ್ತು. ಅದನ್ನು ಮುಚ್ಚಿ ಹಾಕಿದ್ದರು. ಆದರೆ, ನಮ್ಮ ಸರ್ಕಾರದಲ್ಲಿ ಮುಚ್ಚು ಮರೆಯಿಲ್ಲದೇ ಅಕ್ರಮಗಳನ್ನು ಬಯಲಿಗೆ ತರಲಾಗಿದೆ. ಪಾರದರ್ಶಕವಾಗಿ ಯಾರ ಕೈವಾಡ ಇದೆ ಎಂಬುವುದನ್ನು ಹೊರತರುವ ಕೆಲಸ ಆಗಿದೆ. ಮುಕ್ತವಾಗಿ ತನಿಖೆ ಆಗುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾರೆಲ್ಲಾ ಇದ್ದಾರೆ ಅದನ್ನು ಹೇಳಿಕೊಂಡು ಹೋಗಲು ಹೇಳಿ, ಅವರು ತನಿಖಾಧಿಕಾರಿ ಆಗಿದ್ರೋ ಏನೋ ಗೊತ್ತಿಲ್ಲ. ಅಕ್ರಮ ಯಾವುದೇ ಆದರೂ ಕ್ರಮ ಕೈಗೊಳ್ಳಲಾಗುವುದು, ಕಾನೂನಿಗಿಂತ ದೊಡ್ಡ ವ್ಯಕ್ತಿ ಯಾರೂ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಹಿಂದೆ ತಪ್ಪು ಮಾಡಿದವರೂ, ಮುಂದೆ ಮಾಡಿದವರಿಗೂ ಶಿಕ್ಷೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯಬೇಕು ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪ್ರಕರಣ: ಹಿರಿಯ ಐಪಿಎಸ್ ಅಧಿಕಾರಿ ಅರೆಸ್ಟ್, 10 ಪೊಲೀಸ್ ಕಸ್ಟಡಿಗೆ