ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ಸುಳೆಭಾವಿ ಗ್ರಾಮದ ಮಹೇಶ್ ರಾಮಚಂದ್ರ ಮುರಾರಿ (25) ಹಾಗೂ ಪ್ರಕಾಶ್ ಪಾಟೀಲ (22) ಎಂದು ಗುರುತಿಸಲಾಗಿದೆ. ಸುಳೆಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಗುಂಪು ಘರ್ಷಣೆಗೆ ಹಳೆಯ ವೈಷಮ್ಯವೇ ಕಾರಣ ಎಂದು ತಿಳಿದು ಬಂದಿದ್ದು, ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಮಾರಿಹಾಳ ಇನ್ಸ್ಪೆಕ್ಟರ್ ಬಸ್ಸಾಪೂರೆ ಸೇರಿ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಘಟನೆಗೆ ಸ್ಪಷ್ಟಕಾರಣ ಗೊತ್ತಾಗಿಲ್ಲ. ಪರಿಸ್ಥಿತಿ ಈಗ ಉದ್ವಿಗ್ನವಾಗಿದ್ದು, ಮಾರಿಹಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಂತಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದೊಂದು ದಾಯಾದಿ ಕಲಹ ಎಂದು ತಿಳಿದು ಬಂದಿದೆ.