ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳ ಜಮಾನ ಮತ್ತೆ ಶುರುವಾಗಲಿದೆ. ಪ್ರಾಯೋಗಿಕವಾಗಿ ಐದು ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಬಸ್ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಲಾಸಿಪಾಳ್ಯ ಟಿಟಿಎಂಸಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಬ್ಬಲ್ ಡೆಕ್ಕರ್ ಬಸ್ಗಳಿಗೆ ಟೆಂಡರ್ ಕರೆಯಲಾಗಿದೆ. ಒಂದು ವಾರದಲ್ಲಿ ಟೆಂಡರ್ ಪೂರ್ಣವಾಗಲಿದೆ. ಮೊದಲ ಹಂತವಾಗಿ 5 ಡಬ್ಬಲ್ ಡೆಕ್ಕರ್ ಬಸ್ಗಳನ್ನು ರಸ್ತೆಗಿಳಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಐದು ಮಾರ್ಗ ರೂಪಿಸಲಾಗಿದೆ. ಅಂಡರ್ ಪಾಸ್ ಸ್ಕೈವಾಕರ್ ನೋಡಿಕೊಂಡು ಯಾವುದೇ ಅಡೆ ತಡೆ ಇಲ್ಲದೇ ಡಬ್ಬಲ್ ಡೆಕ್ಕರ್ ಬಸ್ ಸಂಚರಿಸವುಂತೆ ಮಾರ್ಗ ರೂಪಿಲಾಗಿದೆ. ಮಕ್ಕಳಿಗೆ ಈ ಬಸ್ ಹೆಚ್ಚಿನ ಖುಷಿ ನೀಡಲಿದೆ, ಪ್ರವಾಸಿಗರಿಗೂ ಅನುಕೂಲವಾಗಲಿದೆ ಎನ್ನುತ್ತ, ನಾವೆಲ್ಲ ಕಾಲೇಜು ದಿನಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ನ ಮೇಲ್ಬಾಗದಲ್ಲಿ ಕುಳಿತು ಸಂಚಾರ ಮಾಡಿದ್ದೆವು ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.
ಅವಶ್ಯಕತೆಗೆ ತಕ್ಕಂತೆ ಬಸ್ ವಿನ್ಯಾಸ : ಡಬ್ಬಲ್ ಡೆಕ್ಕರ್ ಬಸ್ಗಳಿಗೆ ಬಿಎಂಟಿಸಿ ಬಸ್ನ ಬಣ್ಣವನ್ನೇ ಅಂತಿಮಗೊಳಿಸಲಾಗಿದೆ. ಆದರೆ, ಡಬ್ಬಲ್ ಡೆಕ್ಕರ್ ಬಸ್ ವಿನ್ಯಾಸದ ಬಗ್ಗೆ ಚರ್ಚೆ ನಡೆದಿದೆ. ಜಪಾನ್ನ ಡಬ್ಬಲ್ ಡೆಕ್ಕರ್ ಬಸ್ ಮಾದರಿಯನ್ನು ನನ್ನ ಆಪ್ತರು ಕಳಿಸಿದ್ದರು, ಅದನ್ನು ನಾನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕಳಿಸಿಕೊಟ್ಟಿದ್ದೇನೆ. ನಮ್ಮ ಯೋಜಿತ ವಿನ್ಯಾಸ ಹಾಗೂ ಜಪಾನ್ ಮಾದರಿಯನ್ನೆಲ್ಲ ನೋಡಿ, ಇಲ್ಲಿನ ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಅಂತಿಮಗೊಳಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಕಲಾಸಿಪಾಳ್ಯ ಟಿಟಿಎಂಸಿ ವೀಕ್ಷಿಸಿದ್ದೇನೆ, ಬೆಂಗಳೂರಿನ ಹಳೆ ಬಸ್ ನಿಲ್ದಾಣಕ್ಕೆ ಇದೀಗ ಹೊಸ ರೂಪ ನೀಡಲಾಗಿದೆ. 2018ರಲ್ಲಿ 65 ಕೋಟಿ ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಬೀದಿ ದೀಪ, ರ‍್ಯಾಂಪ್ ಇಲ್ಲ ಅಂತ ಸಾಕಷ್ಟು ದೂರುಗಳು ಬಂದಿದ್ದವು, ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮಾಹಿತಿ ನೀಡಿದ್ದರು. ಹಾಗಾಗಿ ಪರಿಶೀಲನೆ ನಡೆಸಿದ್ದೇನೆ, ನಿತ್ಯ 4,400 ಬಿಎಂಟಿಸಿ, 400 ಕೆಎಸ್ಆರ್ಟಿಸಿ, 200ಕ್ಕೂ ಹೆಚ್ಚು ಖಾಸಗಿ ಬಸ್ಗಳ ಟ್ರಿಪ್ ಇಲ್ಲಿಂದ ಆರಂಭಿಸಿ ಸಂಚರಿಸುತ್ತಿವೆ. ಖಾಸಗಿ ಬಸ್ಗಳಿಂದ ನಿತ್ಯ 50 ರೂ.ನಂತೆ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಾರಿಗೆ ಸಚಿವರು ಭರವಸೆ ನೀಡಿದರು.
ನೈಟ್ ಟ್ರಿಪ್ ಹೆಚ್ಚುವರಿ ಚಾರ್ಜ್ ರದ್ದು: ಬಿಎಂಟಿಸಿ ರಾತ್ರಿ ಸೇವೆ ಬಸ್ಗಳಲ್ಲಿ ನೈಟ್ ಟ್ರಿಪ್ನ ಹೆಚ್ಚುವರಿ ಚಾರ್ಜ್ ವ್ಯವಸ್ಥೆಯನ್ನು ಇಂದಿನಿಂದಲೇ ರದ್ದುಪಡಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದು, ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಂದ ಟಿಕೆಟ್ ದರವನ್ನು ಒಂದೂವರೆ ಪಟ್ಟು ಹೆಚ್ಚು ಪಡೆಯಲಾಗುತ್ತಿತ್ತು. ಲೇಟ್ ನೈಟ್ ಟ್ರಿಪ್ನಲ್ಲಿ ಒಂದೂವರೆ ಪಟ್ಟು ಟಿಕೆಟ್ ನೀಡಲ್ಲ ಎಂದು ಇಂದಿನಿಂದ ಆದೇಶ ಮಾಡುತ್ತಿದ್ದೇನೆ. ಹಗಲು ವೇಳೆ ಪಡೆಯುತ್ತಿದ್ದ ಟಿಕೆಟ್ ದರವನ್ನೇ ರಾತ್ರಿ ಸೇವೆ ಒದಗಿಸುವ ಬಿಎಂಟಿಸಿ ಬಸ್ಗಳಲ್ಲಿಯೂ ಪಡೆಯಲಾಗುವುದು ಎಂದರು.
ಬಿಎಂಟಿಸಿ ಉದಯವಾಗಿ 25 ವರ್ಷವಾಗಿದೆ, ಹಾಗಾಗಿ 150 ಚಾಲಕರಿಗೆ ಸನ್ಮಾನ ಮಾಡಲು ತೀರ್ಮಾನ ಮಾಡಲಾಗಿದೆ. ಇದೇ ತಿಂಗಳ 25ರಂದು ನಮ್ಮ ಬಿಎಂಟಿಸಿ ಎಂಬ ಹೊಸ ಆ್ಯಪ್ ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ಬಿಎಂಟಿಸಿ ಬಗ್ಗೆ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಎಂಟಿಸಿಯಿಂದ 921 ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್ಗೆ ಚಾಲನೆ: 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ: ರಾಮಲಿಂಗಾ ರೆಡ್ಡಿ