ಬೆಂಗಳೂರು: ಕೊಡಗಿನಲ್ಲಿ ಹುಲಿ ಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಜನರಲ್ಲಿ ಆತಂಕ ಬೇಡ. ಹುಲಿಗೆ ಗುಂಡು ಹೊಡೆಯಲು ಸೂಚನೆ ನೀಡಿದ್ದು, ಅಧಿಕಾರಿಗಳು ಪತ್ತೆ ಕಾರ್ಯ ನಡೆಸಿದ್ದಾರೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ನಿಯಮ 330 ರ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ 524 ಹುಲಿಗಳಿವೆ. ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಕೇವಲ ನಮಗಿಂತ ಎರಡು ಹುಲಿ ಮಾತ್ರ ಹೆಚ್ಚಿದೆ. ಕೊಡಗಿನಲ್ಲಿ ಹುಲಿಕಾಟದ ಮಾಹಿತಿ ಇದೆ. ನಾನು, ನೀವು ಹೋಗುವುದರಿಂದ ಹುಲಿ ಸಿಗುತ್ತದೆ ಎಂದರೆ ಈಗಲೇ ಬರಲು ಅಭ್ಯಂತರವಿಲ್ಲ. ಆದರೆ ಸಚಿವರು ತೆರಳಿದರೆ ಅಧಿಕಾರಿಗಳು ನಮ್ಮೊಂದಿಗೆ ಓಡಾಡಬೇಕಾಗುತ್ತದೆ. ಆಗ ಹುಲಿ ಪತ್ತೆ ಪ್ರಕ್ರಿಯೆಗೆ ಹಿನ್ನಡೆ ಆಗಲಿದೆ. ಹುಲಿ ಬಂಧನ ಇಲ್ಲವೇ ಹತ್ಯೆ ನಂತರ ಭೇಟಿ ಕೊಡುತ್ತೇನೆ, ಬರುವುದಕ್ಕೆ ಅಭ್ಯಂತರವಿಲ್ಲ ಎಂದರು.
ಪ್ರಾಣಿಗಳಿಂದ ಬೆಳೆ ಹಾನಿ, ಜಾನುವಾರು ಹತ್ಯೆಗೆ ನೀಡುವ ಪರಿಹಾರ ಕಡಿಮೆ ಇದೆ. 10 ಸಾವಿರ ರೂ. ನೀಡುತ್ತಿದ್ದೇವೆ. ಹೆಚ್ಚಿಸುವ ಕ್ರಮ ಕೈಗೊಳ್ಳುತ್ತೇವೆ. ಜನ ಸಾವನ್ನಪ್ಪಿದರೆ 7.5 ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ. ಆರ್ಥಿಕ ಇಲಾಖೆ ಜತೆ ಚರ್ಚಿಸಿ ಪ್ರಾಣಿ, ಮನುಷ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಒಳ್ಳೆಯವರಿಗೇ ಸಾಮಾನ್ಯವಾಗಿ ತೊಂದರೆ ಎದುರಾಗುತ್ತದೆ. ವೀಣಾ ಅಚ್ಚಯ್ಯ ಅವರಿಗೆ ಸಮಸ್ಯೆ ಆಗಿದೆ. ನನಗೂ ಎದುರಾಗಿತ್ತು ಎಂದು ಸಚಿವರು ಹೇಳಿದರು.
ನನಗೆ ಯಾವುದೇ ಸ್ಥಳ ನಿರ್ಬಂಧ ಇಲ್ಲ. ಕೊಡಗು ಜಿಲ್ಲೆಗೆ ಬಂದು ಧೈರ್ಯ ತುಂಬಲು ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಹುಲಿ ತೊಂದರೆ ನಿವಾರಣೆಗೆ ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಬೆಲೆ ಸಿಗುತ್ತಿಲ್ಲ. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹುಲಿ ಸಮಸ್ಯೆ ನಿವಾರಣೆ ಮಾಡದಿದ್ದರೆ ಈ ಭಾಗದ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕಾಗುತ್ತದೆ. ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಹುಲಿ ಬಂಧಿಸುವ ಭರವಸೆ ಕೊಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ಬಸವರಾಜ್ ಇಟಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅರಣ್ಯ ಕಡಿಮೆ ಆಗ್ತಿದೆ, ಪೋಚಿಂಗ್ ಕಡಿಮೆ ಆಗ್ತಿದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರ ವನ್ಯಜೀವಿ ಸಂತಾನ ವೃದ್ಧಿ ತಡೆಯುವ, ಸಂತಾನ ನಿಯಂತ್ರಿಸುವ ಕಾರ್ಯ ಮಾಡಬೇಕು ಎಂದರು.
ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ನಮ್ಮ ಬೆಂಗಳೂರು ಹೊರವಲಯದ ತೋಟದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕುರಿ, ನಾಯಿಗಳನ್ನು ಕಚ್ಚಿಕೊಂಡು ತೆರಳುತ್ತಿವೆ. ಇದರಿಂದ ಕ್ರಮ ಕೈಗೊಳ್ಳಲೇಬೇಕು ಎಂದರು.
ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಸರ್ಕಾರವಾಗಿ ಏನು ಹೇಳಬೇಕೋ ಅದನ್ನು ಹೇಳಿಲ್ಲ. ಸಮಾಧಾನ ಮಾಡುವುದು ಬೇಡ, ಭರವಸೆ ಬೇಕಿತ್ತು. ಕ್ರಮದ ಕುರಿತು ಕರಾರುವಕ್ಕಾಗಿ ಉತ್ತರ ಕೊಡಬೇಕು. ಹುಲಿ ನಿಯಂತ್ರಣ ಸಮಸ್ಯೆ ಬಗ್ಗೆ ಭರವಸೆ ನೀಡುವ ಉತ್ತರ ಬೇಡ. ಇದು ಪರಿಹಾರವಲ್ಲ. ನಿಖರ, ಸ್ಪಷ್ಟವಾದ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಸಚಿವ ಲಿಂಬಾವಳಿ ಮಾತನಾಡಿ, ಈಗಿರುವ ಅವಕಾಶದಲ್ಲಿ ನಾನು ಉತ್ತರ ನೀಡುತ್ತೇನೆ. ಇಲಾಖೆ ಜತೆ ಚರ್ಚೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಖರತೆ ಸಿಗಲಿದೆ. ನಾನು ಎಲ್ಲಾ ಸದಸ್ಯರ ಜತೆ ಸಭೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಮಾತನಾಡಿ, ಹಣಕಾಸು ಇಲಾಖೆಯೇ ಸೂಪರ್ ಗವರ್ನಮೆಂಟ್ ಆಗಿದೆಯೇ? 33 ಇಲಾಖೆಯಲ್ಲಿ ಇದೂ ಒಂದು ಇಲಾಖೆ. ಅವರು ಸಕಾರಾತ್ಮಕ ಸ್ಪಂದನೆ ಮಾಡುವುದಿಲ್ಲವೇ? ಎಲ್ಲಾ ಸಚಿವರೂ ಹಣಕಾಸು ಇಲಾಖೆಯ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ನೀವೆಲ್ಲಾ ಸಚಿವರು ಸಚಿವರು ಗಟ್ಟಿಯಾಗಬೇಕು. ಸಿಎಂ ಜತೆ ಬೇಕಾದರೆ ಚರ್ಚಿಸುತ್ತೇವೆ ಎನ್ನಿ. ಹಣಕಾಸು ಇಲಾಖೆ ಮೇಲೆ ಯಾಕೆ ನಿರೀಕ್ಷೆ ನೋಟ ಬೀರುತ್ತೀರಿ ಎಂದು ಸಲಹೆ ಇತ್ತರು. ಹುಲಿ ವಿಚಾರದ ಸುದೀರ್ಘ ಚರ್ಚೆ ನಂತರ ಪರಿಷತ್ ಕಲಾಪವನ್ನು ನಾಳೆ ಬೆಳಗ್ಗೆ 10.30 ಕ್ಕೆ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಮುಂದೂಡಿದರು.