ಬೆಂಗಳೂರು: ಕೆಲಸವಿಲ್ಲವೆಂದು ಯಾರೂ ಸಿಲಿಕಾನ್ ಸಿಟಿಯನ್ನು ಬಿಟ್ಟು ಹೋಗಬೇಡಿ ಎಂದು ಕಂದಾಯ ಸಚಿವ ಆರ್.ಅಶೋಕ್, ತಮ್ಮ ತಮ್ಮ ಊರುಗಳಿಗೆ ಹೋಗುತ್ತಿರುವ ಜನರಿಗೆ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಯವಿಟ್ಟು ಯಾರೂ ಹೋಗಬೇಡಿ. ಒಂದು ವೇಳೆ ಊರುಗಳಿಗೆ ಹೋಗಲು ನಿರ್ಧಾರ ಮಾಡಿದ್ದರೆ ಇವತ್ತೇ ಹೊರಟುಬಿಡಿ ಎಂದು ತಿಳಿಸಿದ್ದಾರೆ.
ಸಿಎಂ ನೇತೃತ್ವದಲ್ಲಿ ಡಿಸಿಗಳ ಸಭೆ ನಡೆಯುತ್ತದೆ. ಹೆಚ್ಚು ಪಾಸಿಟಿವ್ ಕೇಸ್ಗಳು ಬಂದಿರುವ ಜಿಲ್ಲೆಗಳ ಕುರಿತು ಈಗ ಸಭೆ ಮಾಡಲಾಗುತ್ತದೆ. ಸ್ವಲ್ಪ ಕಡಿಮೆ ಕೇಸ್ಗಳು ಇರುವ ಜಿಲ್ಲೆಗಳ ಬಗ್ಗೆ ಸಂಜೆ ಸಭೆ ನಡೆಸಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಒಂದು ವಾರ ಲಾಕ್ಡೌನ್ ಮಾಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಕೂಡ ಪ್ರಕರಣ ಹೆಚ್ಚಾಗುತ್ತಾ ಇದೆ. ಈ ಬಗ್ಗೆ ಡಿಸಿಗಳ ಸಭೆ ಬಳಿಕ ಸಿಎಂ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಇಡೀ ರಾಜ್ಯ ಲಾಕ್ಡೌನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದಿನ ತೀರ್ಮಾನದಿಂದ ಸಾಕಷ್ಟು ದಿನಗೂಲಿ ನೌಕರರಿಗೆ ಸಮಸ್ಯೆ ಆಗಿದೆ. ಹಾಗಾಗಿ ಈ ಬಾರಿ ಏನೇ ತೀರ್ಮಾನ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.