ಬೆಂಗಳೂರು: ಹೆಚ್ಚಿನ ರೋಗಿಗಳು ಸ್ಥಳೀಯ ಭಾಷೆ ಕನ್ನಡವನ್ನೇ ತಿಳಿದುಕೊಂಡಿದ್ದಾರೆ. ವೈದ್ಯರೂ ಸಹ ರೋಗಿಗಳಿಗೆ ಕಾಯಿಲೆ ಬಗ್ಗೆ ಅರಿವು ಮೂಡಿಸಲು, ಔಷಧಗಳನ್ನು ತಿಳಿಸಲು ಸಲಹೆ ಕೊಡುವಾಗ ಕನ್ನಡದಲ್ಲಿಯೇ ಸಂವಹನ ನಡೆಸಬೇಕು. ಈ ರೀತಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಆರೋಗ್ಯ ಇಲಾಖೆಯನ್ನೂ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಈ ಕುರಿತು ಸುತ್ತೋಲೆಗಳನ್ನು ಹೊರಡಿಸಿದೆ.
ಆರೋಗ್ಯ ಇಲಾಖೆ ಹೊರಡಿಸುವ ಎಲ್ಲಾ ಆದೇಶಗಳು, ಮಾರ್ಗಸೂಚಿಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು. ಇದನ್ನೂ ಸೇರಿದಂತೆ ಈ ಕೆಳಗಿನ ಸೂಚನೆಗಳನ್ನು ನೀಡಿದೆ.
1) ಇಲಾಖೆಯ ಹೊರ ರಾಜ್ಯದ ಅನ್ಯ ಭಾಷಿಕ ಸಿಬ್ಬಂದಿಗೆ ಕನ್ನಡ ಕಲಿಸುವುದು.
2) ಆಡಳಿತದ ಎಲ್ಲಾ ಹಂತಗಳಲ್ಲಿಯೂ ಕನ್ನಡದಲ್ಲಿಯೇ ವ್ಯವಹರಿಸುವುದು.
3) ಟೆಲಿ ವೈದ್ಯಕೀಯ ಸೌಲಭ್ಯದಲ್ಲಿ ರೋಗಿಗಳ ಔಷಧೋಪಚಾರವನ್ನು ಕನ್ನಡದಲ್ಲಿಯೇ ಕೈಗೊಳ್ಳುವುದು.
4) ಹೊರರಾಜ್ಯದ ವೈದ್ಯರಿಗೆ ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ಸ್ಥಳೀಯ ಅಧಿಕಾರಿಗಳಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸುವುದು.
5) ಇಲಾಖಾ ಜಾಲತಾಣದ ಎಲ್ಲಾ ಮಾಹಿತಿ ಕನ್ನಡದಲ್ಲಿಯೂ ಇರುವಂತೆ ಕ್ರಮ ವಹಿಸುವುದು.
6) ವೈದ್ಯಕೀಯ ಕ್ಷೇತ್ರ ಮಾಹಿತಿಯೊಳಗೊಂಡ ಕನ್ನಡ ಮಾಸ ಪತ್ರಿಕೆ ಪ್ರಕಟಿಸುವುದು.
ಇದನ್ನೂ ಓದಿ: ಬಿಎಸ್ವೈ ಬದಲಿಸಿದರೆ ಬಿಜೆಪಿ ವರಿಷ್ಠರು ಲಿಂಗಾಯಿತರ ಅವಕೃಪೆಗೆ ತುತ್ತಾಗುತ್ತಾರೆ : ಎಂ ಬಿ ಪಾಟೀಲ್