ಬೆಂಗಳೂರು: ಕೊರೊನಾ ಸೋಂಕನ್ನು ವೈಜ್ಞಾನಿಕ ನಿರ್ವಹಣೆ ಮಾಡಲು ಸಮರ್ಥ ನೀತಿ ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನ ವೈದ್ಯ ಡಾ. ಎನ್.ಜಿ.ಚೇತನ್ ಕುಮಾರ್ ಈ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘ, ರಾಜ್ಯ ಫಾರ್ಮಸಿ ಕೌನ್ಸಿಲ್ ಮತ್ತು ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯಾಗಿ ಸೇರಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾರರ ಕೋರಿಕೆ:
ಕೊರೊನಾ ಹಿನ್ನೆಲೆಯಲ್ಲಿ ಅನಗತ್ಯವಾಗಿ ನಡೆಸುತ್ತಿರುವ ಸ್ವ್ಯಾಬ್ ಟೆಸ್ಟ್, ಕಂಟೈನ್ಮೆಂಟ್ ವಲಯಗಳು, ಸೀಲ್ ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಯನ್ನು ತಪ್ಪಿಸಬೇಕಿದೆ. ಪಲ್ಸ್ ಆಕ್ಸಿ ಮೀಟರ್ ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಸಮಾಜದಲ್ಲಿ ಉಂಟಾಗಿರುವ ಅನಗತ್ಯ ಗೊಂದಲ ಮತ್ತು ಭಯ ದೂರವಾಗಿಸಲು ಕೊರೊನಾ ನಿರ್ವಹಣೆಗೆ ವೈಜ್ಞಾನಿಕ ವಿಧಾನ ಅನುಸರಿಸಲು ನೀತಿ ರೂಪಿಸಬೇಕಿದೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅಲ್ಲದೇ, ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ನೀಡುವ ಮೂಲಕ ರಕ್ಷಣೆ ಒದಗಿಸಬೇಕು. ಸೋಂಕು ನಿರ್ವಹಣೆ ವಿಚಾರದಲ್ಲಿ ಕೊರೊನಾ ರೋಗದ ತಜ್ಞರು (ಶ್ವಾಸಕೋಸ ತಜ್ಞರು) ಮಾತ್ರ ಪ್ರಮುಖ ನಿರ್ಣಯ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಯೋಜನೆಗಳಡಿ ದಾಖಲಾಗಿರುವ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯಾಧಿಕಾರಿಯಿಂದ ಪರಿಶೀಲಿಸಬೇಕು. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಾಥಮಿಕ ಆರೋಗ ಕೇಂದ್ರಗಳನ್ನು ಬಲವರ್ಧನೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.