ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಹೈಕೋರ್ಟ್ನಲ್ಲಿ ದಾಖಲಾದ ಪ್ರಕರಣಗಳೆಷ್ಟು ಎಂಬ ವಕೀಲ ಸಮುದಾಯದ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ. ಹಾಗೆಯೇ ಈ ಅವಧಿಯಲ್ಲಿ ಎಷ್ಟು ಪ್ರಕರಣಗಳು ದಾಖಲಾದವು, ಎಷ್ಟು ಪ್ರಕರಣಗಳನ್ನು ವಿಚಾರಣೆ ನಡೆಸಲಾಯಿತು ಮತ್ತು ವಿಚಾರಣೆಯಾದ ಪ್ರಕರಣಗಳಲ್ಲಿ ಎಷ್ಟು ಇತ್ಯರ್ಥಗೊಂಡವು ಎಂಬುದರ ಬಗ್ಗೆ ಹೈಕೋರ್ಟ್ ಮಾಹಿತಿ ನೀಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಹೈಕೋರ್ಟ್ ನಡೆಸಿದ ಕಲಾಪಗಳ ಕುರಿತು ರಿಜಿಸ್ಟ್ರಾರ್ ಜನರಲ್ ಮಾಹಿತಿ ನೀಡಿದ್ದಾರೆ. ಅದರಂತೆ ಮಾರ್ಚ್ 26ರಿಂದ ಮೇ 31ರ ವರೆಗೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳಲ್ಲಿ ಒಟ್ಟು 1,973 ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ ಫಿಸಿಕಲ್ ಫೈಲಿಂಗ್ ಮೂಲಕ 788 ಪ್ರಕರಣಗಳು ದಾಖಲಾಗಿದ್ದರೆ, 1,185 ಪ್ರಕರಣಗಳು ಇ-ಫೈಲಿಂಗ್ ಮೂಲಕ ದಾಖಲಾಗಿವೆ. ಲಾಕ್‌ಡೌನ್ ಅವಧಿಯಲ್ಲಿ ದಾಖಲಾದ ಪ್ರಕರಣಗಳನ್ನು ನ್ಯಾಯಮೂರ್ತಿಗಳು ಕೋವಿಡ್-19 ಸಮಸ್ಯೆ ಬದಿಗಿಟ್ಟು 1,336 ಪ್ರಕರಣಗಳನ್ನು ವಿಚಾರಣೆ ನಡೆಸಿ ಒಟ್ಟು 532 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ.
ಹೀಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕೋರ್ಟ್ ಕಲಾಪದಲ್ಲಿ ಬೆಂಗಳೂರು ಪ್ರಧಾನ ಪೀಠ ಅತಿ ಹೆಚ್ಚು, ಅಂದರೆ 1,312 ಪ್ರಕರಣಗಳನ್ನು ವಿಚಾರಣೆ ನಡೆಸಿ, ಅವುಗಳಲ್ಲಿ 455 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ.
ಬೆಂಗಳೂರು ಪ್ರಧಾನ ಪೀಠದಲ್ಲಿ ಅತಿ ಹೆಚ್ಚು ಪ್ರಕರಣಗಳು ವಿಚಾರಣೆಗೆ ಒಳಪಟ್ಟಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಶ್ರಮವೇ ಕಾರಣ ಎನ್ನುತ್ತಾರೆ ಹೈಕೋರ್ಟ್ನ ಹಿರಿಯ ವಕೀಲರು. ಹಾಗೆಯೇ ದೇಶದಲ್ಲಿ ಲಾಕ್‌ಡೌನ್ ಅವಧಿಯಲ್ಲೂ ತುರ್ತು ಪ್ರಕರಣಗಳಿಗೆ ಪರಿಹಾರ ನೀಡುವಲ್ಲಿ ರಾಜ್ಯ ಹೈಕೋರ್ಟ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರ ಹಿಂದೆಯೂ ಸಿಜೆ ಪಾತ್ರವಿತ್ತು ಎಂಬುದು ಕೋರ್ಟ್ ಅಧಿಕಾರಿಗಳ ಅಭಿಪ್ರಾಯ.
ಹಿರಿಯ ವಕೀಲರು ಮತ್ತು ಕೋರ್ಟ್ ಅಧಿಕಾರಿಗಳ ಅಭಿಪ್ರಾಯಕ್ಕೆ ಪೂರಕವಾಗಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿಯೂ ರಾಜ್ಯದ ಕೋರ್ಟ್ಗಳು ಕಕ್ಷೀದಾರರಿಗೆ ನ್ಯಾಯ ಒದಗಿಸಲು ಕಾರ್ಯ ನಿರ್ವಹಿಸುತ್ತಿರುವುದು ಪ್ರಶಂಸನೀಯ.