ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದು, ನೂತನ ಸರ್ಕಾರದ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರ್ಯ ಬಂದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕಂಡ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ 17 ಮಂದಿ ಮುಖ್ಯಮಂತ್ರಿಗಳಾಗಿದ್ದು, ಇದೀಗ ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿದ್ದಾರೆ. ಹಾಗಾಗಿ, ಇದರ ಸಂಖ್ಯೆ 18 ಕ್ಕೆ ಏರಿದೆ. ರಾಜ್ಯದಲ್ಲಿ ಆರು ಬಾರಿ ರಾಷ್ಟ್ರಪತಿ ಆಡಳಿತ ಬಂದಿದೆ.
ಕರ್ನಾಟಕ ರಾಜಕೀಯ ಇತಿಹಾಸ ನೋಡುವುದಾದರೆ, 1952 ರಲ್ಲಿ ಮೊದಲ ವಿಧಾನಸಭೆ ಚುನಾವಣೆ ನಡೆಯಿತು. ಆದರೆ, ಆಗ ಮೈಸೂರು ಪ್ರಾಂತ್ಯ ಇತ್ತು. ಇನ್ನೂ ಪೂರ್ಣ ಪ್ರಮಾಣದ ಕರ್ನಾಟಕ ರಚನೆಯಾಗಿರಲಿಲ್ಲ. ಅಲ್ಲಿಂದ ಇದುವರೆಗೂ 15 ಸಾರ್ವತ್ರಿಕ ಚುನಾವಣೆಗಳೂ ನಡೆದಿದ್ದು, ಈಗ 16 ನೇ ಸಾರ್ವತ್ರಿಕ ಚುನಾವಣೆ ನಡೆದಿದೆ.
ಎರಡನೇ ಸಾರ್ವತ್ರಿಕ ಚುನಾವಣೆ ಬರುವ ವೇಳೆಗೆ ಭಾಷಾವಾರು ರಾಜ್ಯಗಳ ರಚನೆಯಾಗಿ ಕರ್ನಾಟಕ ರಾಜ್ಯ ಉದಯವಾಯಿತು. 1957 ರಲ್ಲಿ ಎರಡನೇ ವಿಧಾನಸಭೆ ಚುನಾವಣೆ ನಡೆಯಿತು. ಸ್ವಾತಂತ್ರ ಬಂದ ನಂತರ 1947 ಅಕ್ಟೋಬರ್ 25 ರಂದು ಕೆ.ಸಿ.ರೆಡ್ಡಿ ಅವರು ಕಾಂಗ್ರೆಸ್ ನಿಂದ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು . 1952 ರ ಮಾರ್ಚ್ 30 ರವರೆಗೆ ಅವರು ಸಿಎಂ ಆಗಿದ್ದರು.
1952 ರಿಂದ 1957 ರ ಅವಧಿಯಲ್ಲಿ ಮೈಸೂರು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಎರಡನೇ ಅವಧಿಯಲ್ಲೂ ಸಹ ಎಸ್. ನಿಜಲಿಂಗಪ್ಪ, ಬಿಡಿ ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು . ಇದುವರೆಗೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ಒಟ್ಟು 23 ಮಂದಿ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ.
ಮೊದಲ ವಿಧಾನಸಭೆ ಚುನಾವಣೆ 1952 ರಲ್ಲಿ (ಮೈಸೂರು ಪ್ರಾಂತ್ಯ) ನಡೆದಿದ್ದು, ಆಗ 80 ಕ್ಷೇತ್ರಗಳಲ್ಲಿ 99 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 19 ಕ್ಷೇತ್ರಗಳು ದ್ವಿಸದಸ್ಯರನ್ನು ಹೊಂದಿದ್ದರೆ, 61 ಕ್ಷೇತ್ರಗಳು ಏಕ ಸದಸ್ಯರನ್ನು ಹೊಂದಿದ್ದವು. ಈ ಚುನಾವಣೆಯಲ್ಲಿ 74 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್, ಸರ್ಕಾರ ರಚನೆ ಮಾಡಿತು.
ನಂತರ ಎರಡನೇ ವಿಧಾನಸಭೆ ಚುನಾವಣೆ 1957ರಲ್ಲಿ ನಡೆಯಿತು. ಆ ವೇಳೆಗೆ ಭಾಷಾವಾರು ರಾಜ್ಯ ರಚನೆಯಾದ ಬಳಿಕ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಿತ್ತು. 179 ಕ್ಷೇತ್ರಗಳಲ್ಲಿ 208 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 29 ದ್ವಿಸದಸ್ಯ ಕ್ಷೇತ್ರಗಳಿದ್ದರೆ, 179 ಏಕ ಸದಸ್ಯ ಕ್ಷೇತ್ರಗಳಿದ್ದವು. 150 ಸ್ಥಾನಗಳನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದು ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು.
ನಾಲ್ಕನೇ ವಿಧಾನಸಭೆ ಚುನಾವಣೆ 1967 ರಲ್ಲಿ ನಡೆದಿದ್ದು, ಆ ವೇಳೆಗಾಗಲೇ ವಿಧಾನಸಭೆಯ ಸ್ಥಾನಗಳ ಸಂಖ್ಯೆ 208 ರಿಂದ 216 ಕ್ಕೆ ಏರಿಕೆಯಾಗಿತ್ತು. ಅದರಲ್ಲಿ 28 ಕ್ಷೇತ್ರಗಳನ್ನು ಎಸ್ ಸಿ, 3 ಕ್ಷೇತ್ರಗಳನ್ನು ಎಸ್ ಟಿಗೆ ಮೀಸಲಿಡಲಾಗಿತ್ತು. ನಂತರ 1978 ರಲ್ಲಿ ಆರನೇ ವಿಧಾನಸಭೆ ಚುನಾವಣೆ ಹೊತ್ತಿಗೆ ವಿಧಾನಸಭೆ ಸ್ಥಾನಗಳ ಸಂಖ್ಯೆ 216 ರಿಂದ 224ಕ್ಕೆ ಏರಿಕೆ ಆಯಿತು.
ಬಳಿಕ 2008 ರಲ್ಲಿ 224 ಕ್ಷೇತ್ರ ಪುನರ್ ವಿಂಗಡನೆ ಮಾಡಿ, ಭೌಗೋಳಿಕವಾಗಿ ಬದಲಾವಣೆ ಮಾಡಲಾಯಿತು. ಹಲವಾರು ಕ್ಷೇತ್ರಗಳಿಗೆ ಮರುನಾಮಕರಣ ಮಾಡುವುದರ ಜೊತೆಗೆ ಎಸ್ ಸಿ, ಎಸ್ ಟಿ ಮೀಸಲು ಕ್ಷೇತ್ರಗಳನ್ನು ಬದಲಾಯಿಸಲಾಯಿತು. ಪ್ರಸ್ತುತ ಇದರ ಆಧಾರದಲ್ಲಿ ಚುನಾವಣೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ: ಮೊದಲ ಆರು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ನದ್ದೇ ಪ್ರಾಬಲ್ಯ ಇತ್ತು. 1972 ರಿಂದ 1978 ರ ವರೆಗೂ ಕಾಂಗ್ರೆಸ್ನವರೇ ಮುಖ್ಯಮಂತ್ರಿಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ 7 ಮತ್ತು 8 ನೇ ವಿಧಾಸಭೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಮತ್ತೆ 9ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ದಕ್ಕಿಸಿಕೊಂಡಿತ್ತು.
ರಾಜ್ಯ ರಾಜಕಾರಣದಲ್ಲಿ 1969ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆ ಅವರು, ನಂತರದಲ್ಲಿ 1975ರ ತುರ್ತು ಪರಿಸ್ಥಿತಿಯಿಂದ ರೋಸಿಹೋಗಿ, ಜನತಾ ಪಕ್ಷ ಸೇರಿದ್ದರು. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
1983 ಜನವರಿಯಿಂದ 1988 ಆಗಸ್ಟ್ 10 ರವರೆಗೂ ರಾಮಕೃಷ್ಣ ಹೆಗಡೆ ಜನತಾ ಪಕ್ಷದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರು ಪಡೆದಿದ್ದರು. ಆದರೆ, ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಕೂಡ ಅಷ್ಟೇ ವಿಪರ್ಯಾಸ. ನಂತರ ಆರೋಪ, ಅಧಿಕಾರ, ಒಳರಾಜಕೀಯ, ಹಗರಣಗಳಿಂದ 1986 ರಲ್ಲಿ ರಾಜೀನಾಮೆ ನೀಡಿದ ಹೆಗಡೆ, ಮತ್ತೆ ಅಧಿಕಾರಕ್ಕೆ ಬಂದು 1988ಆಗಸ್ಟ್ 10 ರವರೆಗೂ ಮುಖ್ಯಮಂತ್ರಿಯಾಗಿದ್ದರು. ಬಳಿಕ ಜನತಾ ಪಕ್ಷದಿಂದ ಎಸ್.ಆರ್. ಬೊಮ್ಮಾಯಿ 1989 ರವರೆಗೆ ಸಿಎಂ ಆಗಿದ್ದರು.
1989 ನವೆಂಬರ್ ನಲ್ಲಿ ಕಾಂಗ್ರೆಸ್ ಗೆದ್ದು ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾದರು. 1990-92 ರವರೆಗೆ ಎಸ್. ಬಂಗಾರಪ್ಪ ಕಾಂಗ್ರೆಸ್ ನಿಂದ ಸಿಎಂ ಆಗಿದ್ದರು. 1992 ರಿಂದ 94 ರವರೆಗೆ ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದರು.
1994 ರಲ್ಲಿ ಜನತಾದಳಕ್ಕೆ ಅಧಿಕಾರ ಸಿಕ್ಕಿತು. ಆಗ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. 1996 ರಲ್ಲಿ ಅವರು ರಾಜೀನಾಮೆ ನೀಡಿ ಕೇಂದ್ರಕ್ಕೆ ಹೋದರು. ಅಲ್ಲಿ ಪ್ರಧಾನಿಯೂ ಆದರು. ಆಗ ಜನತಾದಳದಿಂದ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿ 1999 ರವರೆಗೂ ಇದ್ದರು.
ನಂತರ 1999 ರಲ್ಲಿ ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾದರು . ಅವರ ಕಾಲದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹೆಸರು ಬಂತು. ಆದರೆ, 2004 ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸನ್ನಿವೇಶ ಎದುರಾಯಿತು.
ಮೊದಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಂತು. ಆಗ ಧರ್ಮಸಿಂಗ್ ಸಿಎಂ ಆಗಿದ್ದರು. ನಂತರ ಜೆಡಿಎಸ್ -ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಯಿತು. ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದರು. 2008 ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. 2013 ರಲ್ಲಿ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಐದು ವರ್ಷ ಸರ್ಕಾರ ಪೂರೈಸಿದರು.
2018 ರಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲಿಲ್ಲ. ಆಗ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ, ಅವರು ಬಹುಮತ ಸಾಬೀತುಪಡಿಸದೇ ರಾಜೀನಾಮೆ ಸಲ್ಲಿಸಬೇಕಾಯಿತು. ನಂತರ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು, ಆದರೆ, ಹೆಚ್ಚು ದಿನ ಸರ್ಕಾರ ಇರಲಿಲ್ಲ. ಆಪರೇಷನ್ ಕಮಲದಿಂದಾಗಿ ಮೈತ್ರಿ ಸರ್ಕಾರ ಪತನವಾಯಿತು.
ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಮತ್ತೆ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಯಿತು. ನಂತರ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಉಳಿದ ಅವಧಿಯನ್ನು ಪೂರ್ಣಗೊಳಿಸಿದರು.
ಇದೀಗ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಧಿಕಾರದ ಚುಕ್ಕಾಣೆ ಹಿಡಿದಿದೆ. ಮತ್ತೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಇನ್ನು ಐದು ವರ್ಷ ಪೂರ್ಣಾವಧಿ ಸರ್ಕಾರ ಮಾಡಿದ ಕರ್ನಾಟಕದ ಮುಖ್ಯಮಂತ್ರಿಗಳು ಮೂರೇ ಮಂದಿ. ಮೂವರು ಸಹ ಕಾಂಗ್ರೆಸ್ನವರೇ ಎಂಬುದು ಮತ್ತೊಂದು ವಿಶೇಷ.
ಎಸ್.ನಿಜಲಿಂಗಪ್ಪ ಅವರು 1962 ರಿಂದ 68 ವರೆಗೆ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾಗಿದ್ದರು. ಡಿ.ದೇವರಾಜ ಅರಸು ಅವರು 1972 ರಿಂದ 77 ವರೆಗೆ ಹಾಗೂ ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ತಮ್ಮ ಅಧಿಕಾರ ಪೂರ್ಣಾವಧಿಗೊಳಿಸಿದರು. ಬಿಜೆಪಿ ಹಾಗೂ ಜೆಡಿಎಸ್ ನಿಂದ ಐದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ರಾಜ್ಯದ ಇತಿಹಾಸದಲ್ಲಿ 23 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ.
ರಾಜ್ಯದಲ್ಲಿ ಯಾವ ಪಕ್ಷದಿಂದ ಯಾರು ಮುಖ್ಯಮಂತ್ರಿಗಳು
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು : ಕೆ. ಚೆಂಗಲರಾಯ ರೆಡ್ಡಿ-4 ವರ್ಷಗಳು, 157 ದಿನಗಳು (ಕಾಂಗ್ರೆಸ್ )
ಕೆಂಗಲ್ ಹನುಮಂತಯ್ಯ- 4 ವರ್ಷ 142 ದಿನಗಳು (ಕಾಂಗ್ರೆಸ್)
ಕಡಿದಾಳ್ ಮಂಜಪ್ಪ 73 ದಿನಗಳು (ಕಾಂಗ್ರೆಸ್)
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು (ರಾಜ್ಯ ಏಕೀಕರಣದ ನಂತರ )
ಎಸ್.ನಿಜಲಿಂಗಪ್ಪ 1 ವರ್ಷ, 197 ದಿನ (ಕಾಂಗ್ರೆಸ್)
ಬಿ.ಡಿ. ಜತ್ತಿ- 3 ವರ್ಷ, 302 ದಿನ (ಕಾಂಗ್ರೆಸ್)
ಎಸ್. ಆರ್. ಕಂಠಿ - 99 ದಿನ (ಕಾಂಗ್ರೆಸ್)
ಎಸ್.ನಿಜಲಿಂಗಪ್ಪ -5 ವರ್ಷ, 343 ದಿನ (ಕಾಂಗ್ರೆಸ್)
ವೀರೇಂದ್ರ ಪಾಟೀಲ್ - 2 ವರ್ಷ, 293 ದಿನ (ಕಾಂಗ್ರೆಸ್)
ರಾಷ್ಟ್ರಪತಿ ಆಳ್ವಿಕೆ 1 ವರ್ಷ, 1 ದಿನ
ಡಿ.ದೇವರಾಜ್ ಅರಸ್ 1 ವರ್ಷ, 225 ದಿನ (ಕಾಂಗ್ರೆಸ್)
ಕರ್ನಾಟಕದ ಮುಖ್ಯಮಂತ್ರಿಗಳು :
ಡಿ.ದೇವರಾಜ್ ಅರಸ್ 4 ವರ್ಷ, 91 ದಿನ (ಕಾಂಗ್ರೆಸ್)
59 ದಿನ ರಾಷ್ಟ್ರಪತಿ ಆಳ್ವಿಕೆ
ಡಿ.ದೇವರಾಜ್ ಅರಸು 1 ವರ್ಷ, 318 ದಿನ (ಕಾಂಗ್ರೆಸ್)
ಆರ್. ಗುಂಡೂರಾವ್ 2 ವರ್ಷ, 363 ದಿನ (ಕಾಂಗ್ರೆಸ್)
ರಾಮಕೃಷ್ಣ ಹೆಗಡೆ 5 ವರ್ಷ, 216 ದಿನ (2 ಬಾರಿ ಆಯ್ಕೆ ಪರಿಗಣಿಸಿ) ಜನತಾ ಪಕ್ಷ
ಎಸ್.ಆರ್. ಬೊಮ್ಮಾಯಿ 281 ದಿನ (ಜನತಾ ಪಕ್ಷ)
193 ದಿನ ರಾಷ್ಟ್ರಪತಿ ಆಳ್ವಿಕೆ
ವೀರೇಂದ್ರ ಪಾಟೀಲ್ - 314 ದಿನ (ಕಾಂಗ್ರೆಸ್)
ರಾಷ್ಟ್ರಪತಿ ಆಳ್ವಿಕೆ - 7 ದಿನ.
ಎಸ್.ಬಂಗಾರಪ್ಪ 2 ವರ್ಷ, 33 ದಿನಗಳು (ಕಾಂಗ್ರೆಸ್)
ಎಂ. ವೀರಪ್ಪ ಮೊಯಿಲಿ 2 ವರ್ಷ, 22 ದಿನ (ಕಾಂಗ್ರೆಸ್)
ಹೆಚ್ .ಡಿ.ದೇವೇಗೌಡ 1 ವರ್ಷ, 172 ದಿನ (ಜನತಾ ದಳ)
ಜೆ.ಎಚ್.ಪಟೇಲ್- 3 ವರ್ಷ, 133 ದಿನ (ಜನತಾ ದಳ)
ಎಸ್ .ಎಂ. ಕೃಷ್ಣ- 4 ವರ್ಷ, 230 ದಿನ (ಕಾಂಗ್ರೆಸ್)
ಧರಂಸಿಂಗ್ - 1 ವರ್ಷ, 251 ದಿನ (ಕಾಂಗ್ರೆಸ್)
ಹೆಚ್.ಡಿ.ಕುಮಾರಸ್ವಾಮಿ 1 ವರ್ಷ, 253 ದಿನ (ಜಾತ್ಯತೀತ ಜನತಾ ದಳ)
ರಾಷ್ಟ್ರಪತಿ ಆಳ್ವಿಕೆ 35 ದಿನಗಳು
ಬಿ.ಎಸ್. ಯಡಿಯೂರಪ್ಪ 7 ದಿನಗಳು (ಬಿಜೆಪಿ)
ರಾಷ್ಟ್ರಪತಿ ಆಳ್ವಿಕೆ 191 ದಿನಗಳು
ಬಿ. ಎಸ್. ಯಡಿಯೂರಪ್ಪ 3 ವರ್ಷ, 67 ದಿನ (ಬಿಜೆಪಿ )
ಡಿ ವಿ ಸದಾನಂದ ಗೌಡ 342 ದಿನ (ಬಿಜೆಪಿ)
ಜಗದೀಶ್ ಶೆಟ್ಟರ್ 305 ದಿನ (ಬಿಜೆಪಿ)
ಸಿದ್ದರಾಮಯ್ಯ 5 ವರ್ಷ 4 ದಿನ (ಕಾಂಗ್ರೆಸ್)
ಬಿ.ಎಸ್.ಯಡಿಯೂರಪ್ಪ 6 ದಿನ (ಬಿಜೆಪಿ)
ಹೆಚ್.ಡಿ.ಕುಮಾರಸ್ವಾಮಿ 1 ವರ್ಷ, 64 ದಿನ (ಜಾತ್ಯಾತೀತ ಜನತಾದಳ)
ಬಿ ಎಸ್ ಯಡಿಯೂರಪ್ಪ 2 ವರ್ಷ, 2 ದಿನ (ಬಿಜೆಪಿ )
ಬಸವರಾಜ ಬೊಮ್ಮಾಯಿ 2021 ಜುಲೈ 28 ರಂದು ಅಧಿಕಾರಕ್ಕೆ ಬಂದಿದ್ದು (ಬಿಜೆಪಿ)
ಇದನ್ನೂಓದಿ:ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಘಟಾನುಘಟಿ ನಾಯಕರಿಗೆ ಆಹ್ವಾನಿಸಿದ ಕಾಂಗ್ರೆಸ್...