ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದಾದರೂ ಸ್ಪರ್ಧೆ ಮಾಡಲಿ, ಆ ವಿಚಾರದ ಕುರಿತು ನಾನು ಯಾವುದೇ ರೀತಿಯ ಕಮೆಂಟ್ ಮಾಡುವುದಿಲ್ಲ. ಆದರೆ ಅನಗತ್ಯವಾಗಿ ಜನತೆಯಲ್ಲಿ ಕ್ಷೇತ್ರದ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪ್ರವಾಸಕ್ಕೂ ಮುನ್ನ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಯೂಟರ್ನ್ ವಿಚಾರದ ಕುರಿತು ಚರ್ಚೆಯಾಗುತ್ತಿದೆ. ನಾನು ಈ ವಿಚಾರದಲ್ಲಿ ಕಾಮೆಂಟ್ ಮಾಡೋಕೆ ಇಷ್ಟ ಪಡಲ್ಲ. ಎಲ್ಲಾದರೂ ಒಂದು ಕಡೆ ನಿಲ್ಲಬಹುದು. ಆದರೆ ಯಾವುದಾದರೂ ಕ್ಷೇತ್ರ ಫೈನಲ್ ಮಾಡಿ ಹೇಳಬೇಕು. ಅದನ್ನು ಬಿಟ್ಟು ಸುಮ್ಮನೆ ಜನರಲ್ಲಿ ಗೊಂದಲವನ್ನುಂಟು ಮಾಡಿ ಅಲ್ಲಿ ಇಲ್ಲಿ ಅಂತಾ ಗೊಂದಲ ಮಾಡೋದು ಎಷ್ಟರ ಮಟ್ಟಿಗೆ ಸರಿ. ಅದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ಗೆ ಭವಿಷ್ಯವಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ, ಈ ಚುನಾವಣೆ ನಂತರ ಕಾಂಗ್ರೆಸ್ನವರನ್ನು ಹುಡುಕಬೇಕಾಗಬಹುದು. ರಾಜ್ಯದಲ್ಲಿ ಬಿಜೆಪಿ 140 ಸ್ಥಾನದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಚಿತ್ರದುರ್ಗ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದು, ನಾಳೆ ತುಮಕೂರು ಪ್ರವಾಸ ಮಾಡಲಿದ್ದೇನೆ. ಯಾರು ಏನೇ ಹೇಳಿದರೂ ವಾತಾವರಣ ತುಂಬಾ ಚೆನ್ನಾಗಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ನಿಶ್ಚಿತ ಎಂದು ಭವಿಷ್ಯ ನುಡಿದರು.
ರಾಜ್ಯಕ್ಕೆ ಈಗ ರಾಹುಲ್ ಗಾಂಧಿ ಬಂದಿದ್ದಾರೆ. ಆದರೆ ರಾಹುಲ್ ಗಾಂಧಿಗೂ ಮೋದಿಗೂ ಹೋಲಿಕೆ ಸಾಧ್ಯವಿಲ್ಲ, ಯಾವುದೇ ಸರಿಯಾದ ನಾಯಕತ್ವ ಕಾಂಗ್ರೆಸ್ಗೆ ಇಲ್ಲ. ಹಾಗಾಗಿ ಇತ್ತೀಚೆಗೆ ನಡೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ಗೆ ಭವಿಷ್ಯವಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಗೆದ್ದರೆ ಕಾಂಗ್ರೆಸ್ನವರು ಎಲ್ಲಿದ್ದಾರೆ ಎಂದು ಹುಡುಕಬೇಕಾಗಲಿದೆ ಎಂದರು.
ಉರಿಗೌಡ ನಂಜೇಗೌಡ ಸಿನಿಮಾಗೆ ನಿರ್ಮಲಾನಂದನಾಥ ಶ್ರೀಗಳು ಬ್ರೇಕ್ ಹಾಕಿರುವ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯಡಿಯೂರಪ್ಪ, ಆ ರೀತಿಯಲ್ಲಿ ಪ್ರಶ್ನೆ ಕೇಳಬೇಡಿ ಎನ್ನುತ್ತಾ ನಿರ್ಗಮಿಸಿದರು.
ಬಿಎಸ್ವೈ ಚಿತ್ರದುರ್ಗ ಜಿಲ್ಲಾ ಪ್ರವಾಸ: ಪಕ್ಷದ ವತಿಯಿಂದ ಆಯೋಜನೆ ಮಾಡಿರುವ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗ ಜಿಲ್ಲೆಗೆ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಪ್ರಯಾಣಿಸಿದರು. ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ತೆರಳಿದ್ದು, ಬಿಜೆಪಿ ಆಯೋಜನೆ ಮಾಡಿರುವ ರೋಡ್ ಶೋನಲ್ಲಿ ಭಾವಹಿಸಲಿದ್ದಾರೆ. ನಂತರ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಪಕ್ಷದ ಪರ ಮತ ಯಾಚನೆ ಮಾಡಲಿದ್ದಾರೆ.
ಹಿರಿಯೂರು ಕಾರ್ಯಕ್ರಮ ಮುಗಿದ ನಂತರ ಹಿರಿಯೂರು ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ತೆರಳಲಿರುವ ಯಡಿಯೂರಪ್ಪ, ಚಿತ್ರದುರ್ಗದಲ್ಲಿ ಆಯೋಜನೆ ಮಾಡಿರುವ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಿಜಯ ಸಂಕಲ್ಪ ಯಾತ್ರೆ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದು, ಚಿತ್ರದುರ್ಗದ ಕಾರ್ಯಕ್ರಮ ಮುಗಿಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಇದನ್ನೂ ಓದಿ: ಕನಿಷ್ಠ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಬಿ ಎಸ್ ಯಡಿಯೂರಪ್ಪ