ಬೆಂಗಳೂರು : ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸವಾಲೆಸೆಯುತ್ತಿರುವುದನ್ನು ನೋಡಿದರೆ, ನೀವು ರೌಡಿ ಕೊತ್ವಾಲನ ಶಿಷ್ಯ ಎಂಬುದನ್ನು ತೋರಿಸಿಕೊಡುತ್ತಿರುವಂತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಪಾದಯಾತ್ರೆಯನ್ನು ತಡೆಯಲು ರಾಜ್ಯ ಗೃಹ ಸಚಿವರು ಇನ್ನೊಂದು ಜನ್ಮ ಎತ್ತಿ ಬರಬೇಕು, ತಾಕತ್ತಿದ್ದರೆ ತಡೆಯಿರಿ ನೋಡೋಣ ಎಂಬ ಸವಾಲನ್ನು ಡಿ ಕೆ ಶಿವಕುಮಾರ್ ಹಾಕುತ್ತಿದ್ದಾರೆ. ಪುಡಿ ರೌಡಿಯ ರೀತಿ ಕೆಪಿಸಿಸಿ ಅಧ್ಯಕ್ಷರು ವರ್ತಿಸುತ್ತಿದ್ದಾರೆ. ಡಿಕೆಶಿಯವರೇ, ನೀವು ರೌಡಿ ಕೊತ್ವಾಲನ ಶಿಷ್ಯ ಎಂಬುದನ್ನು ತೋರಿಸಿಕೊಡುತ್ತಿದ್ದೀರಾ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಜಂಟಿ ಪತ್ರಿಕಾಗೋಷ್ಠಿ ಮೂಲಕ ಸುಳ್ಳು ಪ್ರತಿಪಾದನೆಗೆ ಹೊರಟಿರುವ ಕಾಂಗ್ರೆಸ್ ಪಕ್ಷದ ಒಂಟಿ ನಾಯಕರೇ, ಹತ್ತಾರು ಪ್ರಶ್ನೆ ಎತ್ತುವ ಮುನ್ನ ನಮ್ಮ ಒಂದು ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಯಾರು? ಮೇಕೆದಾಟು ಯೋಜನೆಗೆ ತಡೆ ಕೋರಿ ಯಾರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೋ, ಆ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಸೋನಿಯಾ ಗಾಂಧಿ ಕುಮ್ಮಕ್ಕಿನಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ಕಂದಾಯ ಸಚಿವ ಆರ್.ಅಶೋಕ್‌ಗೆ ಕೋವಿಡ್ ಪಾಸಿಟಿವ್, ಆಸ್ಪತ್ರೆಗೆ ದಾಖಲು
ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಹಾಗಾದರೆ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಬೇಕಿರುವುದು ಯಾರ ವಿರುದ್ಧ? ಡಿಕೆಶಿಯವರೇ, ಮೇಕೆದಾಟು ಈಗ ಸ್ಟ್ಯಾಲಿನ್ ಸರ್ಕಾರದ ಅಂಗಳದಲ್ಲಿದೆ. ನೀವು ಸುಳ್ಳಿನಜಾತ್ರೆ ಮಾಡುವ ಬದಲು, ಅವರೊಂದಿಗೆ ಮಾತುಕತೆ ನಡೆಸಿ ಎಂದು ಕಾಂಗ್ರೆಸ್ಗೆ ಬಿಜೆಪಿ ಟಾಂಗ್ ನೀಡಿದೆ.
ಡಿ ಕೆ ಶಿವಕುಮಾರ್ ಅವರೇ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವುದು ಬೇಡ. ಪ್ರಧಾನಿ ಮೋದಿಯೋ, ರಾಹುಲ್ ಗಾಂಧಿಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸುವುದೂ ಬೇಡ. ನೀವಿಬ್ಬರೂ ಸೇರಿ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾದ ದಾವೆ ವಾಪಸ್ ತೆಗಿಸಿ. ನಿಮ್ಮ ತಾಕತ್ತನ್ನು ಅಲ್ಲಿ ಪ್ರದರ್ಶಿಸಿ ಎಂದು ಬಿಜೆಪಿ ತಿರುಗೇಟು ನೀಡಿದೆ.