ಬೆಂಗಳೂರು: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರವೀಣ್ ಪೀಟರ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ರೈಸ್ತ ಸಮುದಾಯದ ಮುಖಂಡರ ಜತೆ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರವೀಣ್ ಗೆಲುವಿಗೆ ಕೈಗೊಳ್ಳಬಹುದಾದ ಪ್ರಚಾರ ಕಾರ್ಯಗಳು, ಕ್ರಿಶ್ಚಿಯನ್ ಸಮುದಾಯದ ಮತಗಳ ಜೊತೆ ಉಳಿದ ಮತಗಳನ್ನು ಯಾವ ರೀತಿ ಸೆಳೆಯಬೇಕು. ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಪ್ರಚಾರ ತಂತ್ರಗಳನ್ನು ಮೀರಿ ಹಾಗೂ ಅವರ ಆಮಿಷಗಳಿಗೆ ಮತದಾರರು ಬಲಿಯಾಗದಂತೆ ತಡೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಸಮರ್ಥವಾಗಿ ವಿವರಿಸಿ ತಮ್ಮತ್ತ ಸೆಳೆಯುವ ಕಾರ್ಯತಂತ್ರ ಹೆಣೆಯುವ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಯಿತು.
ಕ್ರೈಸ್ತ ಸಮುದಾಯದ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಸಾಕಷ್ಟು ಮಹತ್ವದ ಮಾಹಿತಿಯನ್ನು ಒದಗಿಸಿದರು. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಸ್ಪರ್ಧಿಸುವ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಸಮಾನತೆಯನ್ನು ಎತ್ತಿ ಹಿಡಿದಿದೆ. ಅತ್ಯಂತ ಚಿಕ್ಕ ಸಮುದಾಯದಿಂದ ಬಂದಿರುವ ಪ್ರವೀಣ್ ಪೀಟರ್ಗೆ ಮಹತ್ವದ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್ ತನ್ನ ಉನ್ನತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ದೇಶದಲ್ಲಿ ಅತ್ಯಂತ ಹಿರಿಯ ರಾಜಕೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ತಮ್ಮ ಸಮುದಾಯಕ್ಕೆ ಅವಕಾಶ ನೀಡಿದ್ದಕ್ಕಾಗಿ ಕ್ರೈಸ್ತ ನಾಯಕರು ಧನ್ಯವಾದ ಸಲ್ಲಿಸಿದರು.