ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸಂಜೆ 5 ಗಂಟೆಗೆ ಹಿರಿಯ ಕಾಂಗ್ರೆಸ್ ನಾಯಕರ ತುರ್ತು ಸಭೆ ಕರೆದಿದ್ದಾರೆ.
ಕ್ವೀನ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆಯಲಿದೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಆತಂಕ ಸೃಷ್ಟಿಯಾಗುತ್ತಿದೆ. ಈ ಸಂದರ್ಭ ಪ್ರತಿಪಕ್ಷವಾಗಿ ತಮ್ಮ ಕಾರ್ಯನಿರ್ವಹಣೆ ಹೇಗಿರಬೇಕು ಎನ್ನುವ ಕುರಿತು ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಯಾವ ವಿಧದ ಕ್ರಮ ಕೈಗೊಳ್ಳಲು ಸಾಧ್ಯ ಎನ್ನುವುದರ ಕುರಿತು ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲು ಡಿಕೆಶಿ ನಿರ್ಧರಿಸಿದ್ದಾರೆ.
ಈಗಾಗಲೇ ಬಿಜೆಪಿಯ ಭಾಗವೇ ಆಗಿರುವ ಆರ್ಎಸ್ಎಸ್ ತನ್ನ ಸಾಮಾಜಿಕ ಕಳಕಳಿಯನ್ನು ರಾಜ್ಯದ ಬಡ ಜನತೆಯ ಪರವಾಗಿ ವ್ಯಕ್ತಪಡಿಸುತ್ತಿದೆ. ಈ ಸಂದರ್ಭ ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ತಮ್ಮ ಜವಾಬ್ದಾರಿ ಕೂಡ ಇದೆ ಎನ್ನುವುದನ್ನು ಅರಿತಿರುವ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಕಡೆಯಿಂದ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲಿಂ ಅಹಮದ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಸಚಿವರು ಪಾಲ್ಗೊಳ್ಳಲಿದ್ದಾರೆ.