ಬೆಂಗಳೂರು: ನನ್ನ ಲೋಕಸಭಾ ಕ್ಷೇತ್ರ ರಾಮನಗರ ಮಾತ್ರವಲ್ಲದೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಇದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಧ್ಯಮಗಳಲ್ಲಿ ಬಂದ ವರದಿ ನೋಡಿದ್ದೀನಿ. ನಾನು ಚುನಾವಣೆ ಕೆಲಸಗಳಲ್ಲಿ ಬ್ಯುಸಿ ಇದ್ದೆ. ರಾಷ್ಟ್ರೀಯ ನಾಯಕರು ರಾಮನಗರದಿಂದ ಸ್ಪರ್ಧಿಸುವ ವಿಚಾರವಾಗಿ ನನ್ನೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ನನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದೇನೆ. ಆರ್.ಆರ್. ನಗರ, ಆನೇಕಲ್, ರಾಮನಗರ ಸೇರಿದಂತೆ ಈ ಬಾರಿ ಎಲ್ಲಿಂದಲಾದರೂ ಸ್ಪರ್ಧಿಸುವಂತೆ ಒತ್ತಡ ಇದೆ ಎಂದು ಹೇಳಿದರು.
ಇನ್ನು ರಾಮನಗರದಲ್ಲಿ ಇಕ್ಬಾಲ್ ಅವರು ನಾಲ್ಕುವರೆ ವರ್ಷದಿಂದ ಪಕ್ಷದ ಪರ ಕೆಲಸ ಮಾಡ್ತಾ ಇದ್ದಾರೆ. ರಾಮನಗರದಿಂದ ಅವರ ಹೆಸರು ಶಿಫಾರಸು ಮಾಡಿದ್ದೇವೆ. ಚುನಾವಣಾ ವರ್ಷ ಆದ ಮೇಲೆ ಇಕ್ವಿಷನ್ ಇರುತ್ತೆ. ನಮಗೆ ಯಾರ ಮೇಲೂ ಮೃದು ಧೋರಣೆ ಇಲ್ಲ. ಯಾರೇ ನಿಂತರೂ ಸೋಲಿಸುವುದು ಖಚಿತ. ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಉಪ ಚುನಾವಣೆಯಿಂದ ರೋಸಿ ಹೋಗಿದ್ದೀನಿ. ಯಾರೇ ನನ್ನ ಸ್ಪರ್ಧೆ ವಿಚಾರವಾಗಿ ಸೂಚನೆ ನೀಡಿದರೂ ನಾನು ಕ್ಷೇತ್ರದ ಜನತೆ ಜತೆ ಚರ್ಚೆ ಮಾಡಬೇಕು. 10 ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಿ ಎಂದು ಕೇಳ್ತಾ ಇದ್ದಾರೆ. ಅಲ್ಲಿ ಕೆಲಸ ಮಾಡಿರುವರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಂಸದ ಸುರೇಶ್ ತಿಳಿಸಿದರು.
ಮಾಜಿ ಸಚಿವ ಸಿ.ಪಿ. ಯೋಗಿಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ಅಧ್ಯಕ್ಷರೇ ಮುಕ್ತವಾಗಿ ಹೇಳಿದ್ದಾರೆ. ಯಾರೇ ಆದರೂ ಸರಿ ಪಕ್ಷದ ಸಿದ್ಧಾಂತ ಒಪ್ಪಿ ಬರಬಹುದಾಗಿದೆ. ಪಕ್ಷ ಒಬ್ಬರಿಗೆ ಸೀಮಿತವಾಗಿಲ್ಲ ಎಂದರು. ಮಂಡ್ಯದಲ್ಲಿ ಉರಿಗೌಡ ನಂಜೇಗೌಡ ಅವರ ಫ್ಲೆಕ್ಸ್ಅನ್ನು ಬಿಜೆಪಿ ಹಾಕಿದ್ದ ವಿಚಾರವಾಗಿ ಮಾತನಾಡಿ, ನೀವು ಈ ಬಗ್ಗೆ ಅಸ್ವಸ್ಥ ನಾರಾಯಣರನ್ನು ಕೇಳಬೇಕು ಎಂದು ವ್ಯಂಗ್ಯವಾಡಿದರು.
ಬಳಿಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಹೆಚ್ಡಿಕೆ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ನಂತರ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಹೆದ್ದಾರಿಯಲ್ಲಿ ಟೋಲ್ ಕಲೆಕ್ಟ್ ಮಾಡ್ತಾ ಇದ್ದಾರೆ. ಎಕ್ಸಪ್ರೆಸ್ ಹೈವೇಗೆ ಕಿಲೋಮೀಟರ್ಗೆ 2 ರೂ. ಕಲೆಕ್ಟ್ ಮಾಡ್ತಾ ಇದ್ದಾರೆ. ಕಂಪ್ಲಿಷನ್ ಸರ್ಟಿಫಿಕೇಟ್ ಕೊಡದೇ ಟೋಲ್ ಸಂಗ್ರಹ ಮಾಡ್ತಾ ಇದ್ದಾರೆ ಅಂದ್ರೆ, ಏಕಾಏಕಿ ಪಿಎಂ ಟೋಲ್ ಟ್ಯಾಕ್ಸ್ ವಸೂಲಿ ಮಾಡ್ತಾ ಇದ್ದಾರೆ ಎಂದ ಅವರು, ಯಾವ ವೈಜ್ಞಾನಿಕ ಆಧಾರದ ಮೇಲೆ ಓಡಾಡದೇ ಇರುವಷ್ಟು ಟ್ಯಾಕ್ಸ್ ಹಾಕ್ತಾ ಇದ್ದಾರೆ? ಎಂದು ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ವಿಚಾರ ಮಾತನಾಡಿ, ಈಗಾಗಲೇ ರಾಜ್ಯದ ನಾಯಕರು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿ ಪಟ್ಟಿ ಕಳಿಸಿದ್ದಾರೆ ಎಂದರು. ಬಳಿಕ ಧ್ರುವನಾರಾಯಣ್ರ ನಿಧನದ ಬಗ್ಗೆ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ್ ಸಾವು ಅತ್ಯಂತ ದುಃಖಕರ ಸಂಗತಿ. ಕಾಂಗ್ರೆಸ್ ಪಕ್ಷದ ಒಬ್ಬ ಪ್ರಾಮಾಣಿಕ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದರು.
ಇದನ್ನೂ ಓದಿ: ದೆಹಲಿಯತ್ತ ಸಚಿವ ಸೋಮಣ್ಣ ಪ್ರಯಾಣ: ಬಿಎಸ್ವೈ ವಿರುದ್ಧ ಪರೋಕ್ಷ ಅಸಮಾಧಾನ