ಬೆಂಗಳೂರು : ಆರ್.ಆರ್ ನಗರ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಕಡೆ ದಿನ. ಮೂರು ಪಕ್ಷಗಳ ನಾಯಕರು ಮಂದಿರ, ಮಸೀದಿ, ಚರ್ಚ್ಗಳಿಗೆ ಭೇಟಿ ನೀಡಿ ಸಮುದಾಯದ ಮುಖಂಡರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೆಪಿ ಪಾರ್ಕ್ನ ಬರೇಕ ಚರ್ಚ್, ಮತ್ತಿಕೆರೆಯ ಆತುಮನೇಸರ್ ಚರ್ಚ್, ಯಶವಂತಪುರದ ಜುಮ್ಮಾ ಮಸೀದಿಗಳಿಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ವೋಟ್ ಕೇಳಬಾರದು ಎಂದು ನಮಗೂ ಗೊತ್ತಿದೆ. ಆಶೀರ್ವಾದ ಪಡೆಯೋಕೆ ಬಂದಿದ್ದೆಯಷ್ಟೇ.. ಯಾವ ರೀತಿ ದೇವಸ್ಥಾನಕ್ಕೆ ಹೋಗ್ತಿವೋ, ಅದೇ ರೀತಿ ಚರ್ಚ್, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಹೊರಗಡೆಯಿಂದ ಬಂದು ದುಡ್ಡು ಹಂಚುತ್ತಿದ್ದಾರೆ ಎಂಬ ಮುನಿರತ್ನ ಆರೋಪಕ್ಕೆ ಉತ್ತರಿಸಿ, ಪಾಪ ಅವನಿಗೆ ಏನೋ ಹೆಚ್ಚು ಕಡಿಮೆ ಆಗಿದೆ, ಟೆನ್ಷನ್‌ನಲ್ಲಿದ್ದಾನೆ. ಅದಕ್ಕೆ ಏನಾದ್ರೂ ಮಾತನಾಡ್ಕೊಂಡು ಹೋಗ್ಲಿ. ಅವರ ಪಾರ್ಟಿಲಿ ಬೇಕಾದಷ್ಟು ಪ್ರಾಬ್ಲಂ ಇದೆ.
ಅವನನ್ನು ಮಂತ್ರಿ ಮಾಡ್ತೀನಿ ಎಂದು ಸಿಎಂ ಹೇಳಿದ್ಮೇಲೆ, ಹಳಬರಿಗೆ ಬಹಳ ಸಂಕಟ ಶುರುವಾಗಿದೆ. ಅದಕ್ಕೆ ಅವರೆಲ್ಲ ಮುಂದಿನ ದಿನಗಳಲ್ಲಿ ಅವರದ್ದೇ ತೀರ್ಮಾನ ಮಾಡ್ತಾರೆ. ಕೇಸ್ ಹಾಕಿಸಿಕೊಂಡಿರುವವರಿಗೆ ಎಲ್ಲವೂ ಗೊತ್ತಿದೆ. ದುಡ್ಡು ಹಂಚಿಕೆ ಬಗ್ಗೆ ನಮ್ಮತ್ರ ಎಲ್ಲಾ ಕ್ಯಾಸೆಟ್‌ಗಳಿವೆ. ನಿನ್ನೆ ರಾತ್ರಿಯಿಂದ 20 ವಿಡಿಯೋ ಮಾಡಿದ್ದೇವೆ. ಮೊದಲು ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದರು.
ಆರ್.ಆರ್ ನಗರವನ್ನು ಮತ್ತೊಂದು ಡಿಜೆ ಹಳ್ಳಿ ಮಾಡ್ತಾರೆ ಎಂಬ ಹೇಳಿಕೆ ಕುರಿತು ಮಾತನಾಡಿ, ಅವನ ಬಾಯಲ್ಲಿ ಎಂತೆಂಥ ಮಾತುಗಳು ಬರ್ತಿವೆ ನೋಡಿ. ಈ ಕ್ಷೇತ್ರಕ್ಕೆ ಅವಮಾನ ಆಗ್ತಿದೆ, ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡ್ಬೇಕು. ಈ ಕ್ಷೇತ್ರದ ಗೌರವ ಉಳಿಸಬೇಕು, ಶಾಂತಿ ಕಾಪಾಡಬೇಕು ಎಂದರು.
ಭ್ರಷ್ಟ ಅಂತಿದ್ರೆ ಮೊದಲೇ ಹೊರಗಡೆ ಹಾಕ್ಬೇಕಿತ್ತು ಎಂಬ ಮುನಿರತ್ನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಗೊತ್ತಿರಲಿಲ್ಲ, ಲೇಟಾಗಿ ಗೊತ್ತಾಯ್ತು. ಈ ಸಿನಿಮಾ ಡೈಲಾಗ್ ಸಿನಿಮಾದಲ್ಲಿ ಮಾತ್ರ ಅಂತಾ ತಿಳ್ಕೊಂಡಿದ್ವಿ, ನಿಜ ಜೀವನದಲ್ಲಿ ಇದೆ ಅಂತಾ ಅನ್ಕೊಂಡಿರಲಿಲ್ಲ ಎಂದು ತಿರುಗೇಟು ನೀಡಿದರು.
ಸಂಪತ್ ರಾಜ್ ನಾಪತ್ತೆ ವಿಚಾರವಾಗಿ ಮಾತನಾಡಿ, ಸಂಪತ್ ರಾಜ್ ಎಲ್ಲೂ ಹೋಗಿಲ್ಲ. ಕೊರೊನಾ ಕಾರಣ ವೈದ್ಯರು ರೆಸ್ಟ್ ಮಾಡಲು ಹೇಳಿದ್ದಾರೆ. ಚುನಾವಣೆ ಇರುವುದರಿಂದ ಅಧಿಕಾರಿಗಳು ಬೇಕಂತಲೇ ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.