ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ದೆಹಲಿಗೆ ತೆರಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ನಿನ್ನೆ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿರುವ ಡಿ.ಕೆ.ಶಿವಕುಮಾರ್, ಇಂದು ಪಕ್ಷದ ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಇದೇ ಸಂದರ್ಭ ರಾಜ್ಯ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಪಟ್ಟಿಯನ್ನು ಸಹ ಕೊಂಡೊಯ್ದಿರುವ ಶಿವಕುಮಾರ್, ಇದಕ್ಕೆ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆಯಲಿದ್ದಾರೆ.
ರಾಹುಲ್ ಗಾಂಧಿ ಭೇಟಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ಯಾರನ್ನೂ ಭೇಟಿ ಮಾಡಲು ಅವಕಾಶ ನೀಡದ ಹಿನ್ನೆಲೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಮಾತುಕತೆ ನಡೆಸಿ, ಹೊಸ ತಂಡ ರಚನೆಗೆ ಒಪ್ಪಿಗೆ ಪಡೆಯಲು ಡಿಕೆಶಿ ಚಿಂತನೆ ನಡೆಸಿದ್ದಾರೆ.
ಬೆಂಗಳೂರಿನಿಂದ ತೆರಳುವ ಮುನ್ನ ಅವರು ಸುಮಾರು 85 ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ಹೈಕಮಾಂಡ್ ಪದಾಧಿಕಾರಿಗಳ ನೇಮಕಕ್ಕೆ ಒಪ್ಪಿಗೆ ನೀಡಿದರೆ ಆದಷ್ಟು ಶೀಘ್ರ ಪದಾಧಿಕಾರಿಗಳ ನೇಮಕ ಆರಂಭವಾಗಲಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಪದಾಧಿಕಾರಿಗಳ ನೇಮಕ ಸಂಬಂಧ ಚರ್ಚಿಸಿರುವ ಶಿವಕುಮಾರ್, ಹೈಕಮಾಂಡ್ ನಾಯಕರ ಭೇಟಿ ನಂತರ ವಾಪಸಾಗಿ ಇನ್ನೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಹಂತ ಹಂತವಾಗಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಮಾಡುವ ಪ್ರಕ್ರಿಯೆ ನಂತರ ಚಾಲನೆ ಪಡೆಯಲಿದೆ.