ಬೆಂಗಳೂರು: ಐಟಿ ನೋಟಿಸ್ಗಳಿಗೆ ಉತ್ತರ ಕೊಡೋದ್ರಲ್ಲಿಯೇ ನನಗೆ ಸಾಕಾಗಿ ಹೋಗಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಮಾತನಾಡಿ ನನಗೆ ಯಾವ ಗಿಫ್ಟ್ನೂ ಬೇಡ. ನಾನು ಯಾವ ಗಿಫ್ಟ್ನೂ ಕೇಳೋಕೆ ಹೋಗಿಲ್ಲ. ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ. ಹಾಗೇ ಇರ್ತೇನೆ, ನನ್ನ ಹಾಗೆಯೇ ಇರಲು ಬಿಡಿ. ನೀವೂ ನನ್ನ ಬಗ್ಗೆ ಮಾತನಾಡಬೇಡಿ. ಬೆಳಗ್ಗೆ ಸಂಜೆ ಬರೋ ನೋಟಿಸ್ಗೆ ಉತ್ತರ ಕೊಡೋದ್ರಲ್ಲೇ ನನಗೆ ಸಾಕಾಗಿದೆ ಎಂದರು.
ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ನಂಗೆ ಯಾರ ಸಪೋರ್ಟ್ ಯಾಕೆ ಬೇಕು? ನನ್ನ ಪರವಾಗಿ ಯಾರು ಯಾಕೆ ಧ್ವನಿ ಎತ್ತಬೇಕು ಎಂದರು.
ಏಸು ಪ್ರತಿಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಅಶೋಕ್ ಚಕ್ರವರ್ತಿ ಸಾಹೇಬ್ರು ಮತ್ತೆ ರೇಣುಕಾಚಾರ್ಯ ಏನೋನೋ ಮಾತಾಡ್ತಿದ್ದಾರೆ. ಮಾತಾಡ್ಲಿ ನನಗೆ ನನ್ನ ಜೊತೆ ನನ್ನ ಜನ ಇದ್ದಾರೆ. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದರು.
ಅಲ್ಲದೇ ಇಲ್ಲಿ ಎಲ್ಲವೂ ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ. ಸರ್ಕಾರದಿಂದ ಯಾವ್ಯಾವ ಬೆಟ್ಟದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ ಲಿಸ್ಟ್ ತರಿಸಿಕೊಳ್ಳಲಿ. ಅವರಿಗಿರುವ ಪರಮಾಧಿಕಾರ ಯಾರಾದ್ರೂ ಕಿತ್ತುಕೊಳ್ಳಲು ಸಾಧ್ಯವಾ? ಜನರು ಕೇಳಿಕೊಂಡ ಕೆಲಸವನ್ನು ಮಾಡಿಕೊಂಡು ನಾವು ನಮ್ಮ ಹಳ್ಳಿಯಲ್ಲಿ ಜೀವನ ಮಾಡ್ತಿದ್ದೀವಿ. ನಾನು ಸ್ಟ್ರಾಂಗೇ ಅಲ್ವಲ್ಲಪ್ಪ. ಇಂಥ ಐಟಿ ಸರ್ಕಾರದ ಮೇಲೆ ಕುಸ್ತಿ ಮಾಡೋದಕ್ಕಾಗತ್ತಾ? ನಾನುಂಟು ನನ್ನ ಜನ ಉಂಟು ಎಂದರು.