ಬೆಂಗಳೂರು: ಪುತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಅವರ ರೋಡ್ ಶೋ ರದ್ದುಗೊಂಡಿದೆ. ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ತೊಡಕು ಎದುರಾದರೆ ಇನ್ನು ಸಾಮಾನ್ಯರ ಕಥೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಗಳೂರು ಭಾಗದಲ್ಲಿ ಅಮಿತ್ ಶಾ ಪ್ರಚಾರ ಮಾಡಬೇಕಿತ್ತು. ರೋಡ್ ಶೋ ಮೂಲಕ ಅವರು ಕಾರ್ಯಕ್ರಮ ಕೈಗೊಳ್ಳಬೇಕಿತ್ತು. ಪುತ್ತೂರು ರೋಡ್ ಶೋ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಅಮಿತ್ ಶಾಗೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ ಅಂತಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಿರಬಹುದು? ಇದಕ್ಕಿಂತ ಅವಮಾನ ರಾಜ್ಯಕ್ಕೆ ಏನು ಬೇಕು? ಇದಕ್ಕೆ ಉತ್ತರ ಕೊಡಲಿ ಮೊದಲು ಎಂದರು.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಕುರಿತು ಮಾತನಾಡಿದ ಅವರು, ಅಲ್ಲಿನ ಕಾರ್ಯಕರ್ತರು ಅಧ್ಯಕ್ಷರ ಗಾಡಿಯನ್ನೇ ಎತ್ತಿ ಬಿಸಾಡಿದ್ರು. ಬಡವರ ಮಕ್ಕಳನ್ನು ಇಂತಹ ಕೃತ್ಯಗಳಿಗೆ ಇಳಿಸಿ ಬಲಿ ತೆಗೆದುಕೊಳ್ತಿದ್ದಾರೆ. ಆಯನೂರು ಮಂಜುನಾಥ್ ಮೋದಿ ಫೋಟೋ ಹಾಕಿಕೊಂಡಿದ್ದಾರೆ. ನೆಮ್ಮದಿ ಶಾಂತಿಯುತ ಶಿವಮೊಗ್ಗಕ್ಕಾಗಿ ಬೆಂಬಲಿಸಿ ಅಂತ ಆಯನೂರು ಬೋರ್ಡ್ ಹಾಕಿಕೊಂಡಿದ್ದಾರೆ. ಒಬ್ಬ ಎಂಎಲ್ಸಿಗೆ ನಾವು ಹೇಳುತ್ತಿದ್ದ ಸತ್ಯ ಅರ್ಥವಾಗಿದೆ. ಕೇಂದ್ರ ಸಚಿವರಿಗೆ ಕಾನೂನು ರಕ್ಷಣೆ ಕೊಡಲು ಆಗುತ್ತಿಲ್ಲ ಅಂದ್ರೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು. ರಾಜ್ಯದಲ್ಲಿ ಕಾನೂನು ಭದ್ರತೆ ಇಲ್ಲದ ಸರ್ಕಾರ ಇಲ್ಲಿಗೇ ಕೊನೆಯಾಗಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಶಾಂತಿ ಬಯಸಿರುವುದರಲ್ಲಿ ಏನಿದೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಮಾತನಾಡಿ, ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದಿಲ್ಲ. 144 ಸೆಕ್ಷನ್ ಇದ್ರು ಬಾವುಟ ಹಿಡಿದುಕೊಂಡು ಬಂದಿದ್ದರು. ಬೇರೆಯವರು ಮೃತಪಟ್ಟಾಗ ಒಂದು ರೂಪಾಯಿ ಕೊಡಲಿಲ್ಲ. ಹಿಂದೂ ಸಂಘಟನೆ ಹುಡುಗ ಸಾವನ್ನಪ್ಪಿದಾಗ 15 ಲಕ್ಷ ರೂಪಾಯಿ ಘೋಷಣೆ ಮಾಡುತ್ತಾರೆ. ಬೇರೆಯವರು ಮೊನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಾಗ ದುಡ್ಡು ಕೊಡಲಿಲ್ಲ. ಈಗ ಆಯನೂರು ಮಂಜುನಾಥ್ ಸತ್ಯ ನುಡಿದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದರು.
ಈ ಬಾರಿ ಉಡುಪಿ ಮಂಗಳೂರಿನಲ್ಲಿಯೇ 10 ಸ್ಥಾನ ಗೆಲ್ಲುತ್ತೇವೆ. ಎಲ್ಲಾ ವರ್ಗದವರಿಗೂ ಬಿಲ್ಲವ ಬಂಟರಿಗೂ ಪ್ರತ್ಯೇಕ ನಿಗಮ ಸ್ಥಾಪನೆ ಮಾಡ್ತಿದ್ದೇವೆ. ಕರಾವಳಿಗೆ ಪ್ರತ್ಯೇಕ ಟೂರಿಸಂ ನೀತಿ ನಾವು ಮಾಡ್ತಿದ್ದೇವೆ. ನಮ್ಮ ಪಕ್ಷದಲ್ಲಿ ಚುನಾವಣಾ ಆಯ್ಕೆ ಸಂದರ್ಭದಲ್ಲಿ ಸ್ಕ್ರೀನಿಂಗ್ ಕಮಿಟಿ ಅದರದ್ದೇ ಆದ ಪದ್ಧತಿ ಇದೆ. ನಾವು ಈಗಾಗಲೇ ಎಲೆಕ್ಷನ್ ಕಮಿಟಿ ಮೀಟಿಂಗ್ ಮಾಡಿದ್ದೀವಿ. ಈಗಾಗಲೇ ಬಂದಿರುವಂತಹ ಎಲ್ಲಾ ಶಿಫಾರಸ್ಸುಗಳು, ಸ್ಕ್ರೀನಿಂಗ್ ಕಮಿಟಿಗೆ ಹೋಗುತ್ತವೆ. ಅವರು ಅದನ್ನ ಕುಳಿತುಕೊಂಡು ಚರ್ಚೆ ಮಾಡುತ್ತಾರೆ. ನಮ್ಮನ್ನು ಮತ್ತು ಉಳಿದಂತೆ ಎಲ್ಲ ನಾಯಕರನ್ನು ಕರೆದು ಮಾತನಾಡುತ್ತಾರೆ. ಎಲ್ಲಾ ಆದ ನಂತರ ಸದ್ಯದಲ್ಲೇ ಲಿಸ್ಟ್ ಬರುತ್ತೆ ಎಂದು ತಿಳಿಸಿದರು.
ಗ್ಯಾರಂಟಿ ಕಾರ್ಡ್ ಹಂಚಿಕೆ.. ಕೆಪಿಸಿಸಿ ಕಚೇರಿಗೆ ಆಗಮಿಸಿರುವ ಗೃಹಜ್ಯೋತಿ, ಗೃಹಲಕ್ಷಿ ಗ್ಯಾರಂಟಿ ಕಾರ್ಡ್ ಹಂಚಿಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ವಿವರ ನೀಡಿದರು.
ಟಿ ಜಾನ್ ನಿವಾಸಕ್ಕೆ ಭೇಟಿ.. ಶುಕ್ರವಾರ ಅನಾರೋಗ್ಯದಿಂದ ನಿಧನರಾದ ಮಾಜಿ ಸಚಿವ ಟಿ ಜಾನ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬೆಂಗಳೂರಿನ ಇಂದಿರಾನಗರದಲ್ಲಿರುವ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ ಡಿಕೆಶಿ, ಬಳಿಕ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: ಮಹದಾಯಿ ನದಿಯನ್ನು ಮಲಪ್ರಭಾಗೆ ಜೋಡಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಸಿಎಂ ಬೊಮ್ಮಾಯಿ