ಬೆಂಗಳೂರು : ಕಳೆದ ಏಳು ವರ್ಷದಿಂದ ಬಿಜೆಪಿ ಆಡಳಿತ ಇದೆ. ಆದ್ರೆ, ಒಂದೇ ಒಂದು ಕಲ್ಯಾಣ ಕಾರ್ಯಕ್ರಮ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
75ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬೆಂಗಳೂರು ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ವೃತ್ತದಿಂದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದವರೆಗೆ ನಡೆದ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ್ರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ : ಜನರಿಗೆ ಕೊಡುಗೆ ಕೊಟ್ಟಿಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈ ಜೊಡಿಸಿದ್ದೇವೆ. ಆದ್ರೆ, ಆಡಳಿತ ಪಕ್ಷ ಮಾಡಿದ ಸಾಧನೆ ನೋಡಿದ್ದೇವೆ. ಸಾವಿರಾರು ಜನರು ಸಂಕಷ್ಟದಲ್ಲಿದ್ದರು. ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ರು. ಅವರ ಧ್ವನಿಯಾಗಿ ಕಾಂಗ್ರೆಸ್ ಕೆಲಸ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕೊಡುಗೆಯಿದೆ : ಇದೊಂದು ಐತಿಹಾಸಿಕ ದಿನ. ನಮ್ಮ ಪಾಲಿನ ಸುದಿನ. ನಮಗೆ ಸ್ವತಂತ್ರ ತಂದ ದಿನ. ಸ್ವತಂತ್ರ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಮ್ಮ ನಾಯಕ ನೆಹರೂ ಹೇಳಿದ್ರು, ಪ್ರತಿಯೊಬ್ಬ ನಾಗರಿಕನ ಕಣ್ಣೀರು ಒರೆಸಬೇಕು ಎಂದು. ಎಲ್ಲಿಯವರೆಗೆ ಕಷ್ಟ ಇರುತ್ತೋ ಅಲ್ಲಿಯವರೆಗೆ ಕೆಲಸ ಮಾಡಬೇಕು. ಇದರಿಂದ ಮನೆ ಇಲ್ಲದವರಿಗೆ ಮನೆ, ಭೂಮಿ, ಕೆಲಸ ಸಿಕ್ಕಿದೆ. ಸ್ವತಂತ್ರ ಭಾರತದ ಕಲ್ಯಾಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕೊಡುಗೆಯಿದೆ ಎಂದರು.
ಡಿಕೆಶಿ ಆಕ್ರೋಶ : ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್, ಮತಿಗೇಡಿಗಳು ಬದಲಾವಣೆ ಮಾಡಲು ಹೊರಟಿದ್ದಾರೆ. ಅವರ ಇತಿಹಾಸ ತಿಳಿಯದೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಕಟ್ಟುವ ಕೆಲಸ ಮಾಡಿದೆ. ಆದ್ರೆ, ಬಿಜೆಪಿ ಕೆಡವೋ ಕೆಲಸ ಮಾಡಿದೆ. ಅದರ ವಿರುದ್ಧ ಧ್ವನಿ ಎತ್ತೋಣ. ಜನರ ಬಳಿ ಹೋಗೋಣ, ಚುನಾವಣೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರೋಣ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜತೆ ಸಮಾರಂಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಎಸ್ ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್, ಎಂಎಲ್ಸಿಗಳಾದ ಬಿ ಕೆ ಹರಿಪ್ರಸಾದ್, ಯು ಬಿ ವೆಂಕಟೇಶ್, ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮತ್ತಿತರರು ಭಾಗವಹಿಸಿದ್ದರು. ಸಮಾರಂಭದಲ್ಲಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿಗೆ ಶಾಂತಿ ಸಂದೇಶ ಸಾರಿದರು.
ಮೆರವಣಿಗೆ : ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಖೋಡೆ ವೃತ್ತದಿಂದ ರೇಸ್ ಕೋರ್ಸ್ ಆಸ್ತಿಯ ಕಾಂಗ್ರೆಸ್ ಭವನದವರೆಗೆ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಿದರು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಳಿ ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಯುವ ಕಾಂಗ್ರೆಸ್ ಕಾರ್ಯಕರ್ತರು ಒಂದು ಕಿಲೋಮೀಟರ್ ಉದ್ದದ ಭಾರತ ಧ್ವಜವನ್ನು ಮೆರವಣಿಗೆ ಮೂಲಕ ತಂದು ಗಮನ ಸೆಳೆದರು.
ಬಾಯ್ತಪ್ಪಿ ಸೋನಿಯಾ ಹುತಾತ್ಮ ಎಂದರು : ಸ್ವಾತಂತ್ರೋತ್ಸವ ಹಿನ್ನೆಲೆ ಡಿಕೆಶಿ ಓದಿದ ಲಿಖಿತ ಭಾಷಣದ ವೇಳೆಯಲ್ಲಿ ದೊಡ್ಡ ಎಡವಟ್ಟು ಮಾಡಿದ್ರು. ಹುತಾತ್ಮ ಇಂದಿರಾ ಗಾಂಧಿ ಎನ್ನುವ ಬದಲು ಸೋನಿಯಾ ಗಾಂಧಿ ಎಂದರು. ನಂತರ ಗಲಿಬಿಲಿಗೊಂಡ ಡಿಕೆಶಿ ಕೊಂಚ ಸಾವರಿಸಿಕೊಂಡು, ಮಿಸ್ಟೇಕ್ ಆಯಿತು 'Sorry' ಎಂದು ಇಂದಿರಾ ಗಾಂಧಿ ಅವರ ಸಾಧನೆಗಳನ್ನು ಪ್ರಸ್ತಾಪಿಸಿದರು.
ದೇಶ ಕಟ್ಟಲು ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾತಂತ್ರ್ಯಕ್ಕಾಗಿ ಹಿರಿಯರು ಹೋರಾಟ ಮಾಡಿದ್ದಾರೆ. ಆದರೆ, ಈಗ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಡಬೇಕಾಗಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಸಂಚು ನಡೆಸಲಾಗುತ್ತದೆ. ಇಂತಹ ಮಹನೀಯರ ಹೆಸರು ಬದಲಿಸಿದರೂ ಇವರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಹೇಳುವ ಮೂಲಕ ಡಿ ಕೆ ಶಿವಕುಮಾರ್ ಭಾಷಣದ ವೇಳೆ ತಾವು ಮಾಡಿದ ಎಡವಟ್ಟನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು.