ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಜಾಧ್ವನಿ ಯಾತ್ರೆ ನಿಮಿತ್ತ ಬೆಂಗಳೂರಿಂದ ಮಾಲೂರಿಗೆ ಬಸ್ನಲ್ಲಿ ಇಂದು (ಶನಿವಾರ) ಪ್ರಯಾಣ ಬೆಳೆಸಿದರು. ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪ, ಮಾಜಿ ಸಚಿವ ದಿನೇಶ್ ಗುಂಡೂರಾವ್, ಹೆಚ್.ಸಿ ಮಹದೇವಪ್ಪ, ಎಂಎಲ್ಸಿ ಎಸ್.ರವಿ ಮತ್ತಿತರ ಮುಖಂಡರು ಇವರಿಗೆ ಸಾಥ್ ನೀಡಿದರು. ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುರುಡುಮಲೈಯಿಂದ ಯಾತ್ರೆ ಆರಂಭ ಮಾಡಿದ್ದೇವೆ. ಜನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಭ್ರಷ್ಟ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಂದು ಪೋಡಿ ಮಾಡಿಕೊಳ್ಳುವುದಕ್ಕೆ 40 ಸಾವಿರ ಕೊಡಬೇಕಂತೆ. ಕಂದಾಯ ಸಚಿವ ಆಶೋಕ್ ಗ್ರಾಮಗಳಿಗೆ ಹೋಗಿ ಮಲಗಿ ಬರ್ತಿದ್ದಾರೆ. ಏನು ಪ್ರಯೋಜನ. ಜನ ಪ್ರಾಕ್ಟಿಕಲ್ ಆಗಿ ಇದ್ದಾರೆ. ಪಿಂಚಣಿ ಮತ್ತು ವಿಧವಾ ವೇತನ ಬರುತ್ತಿಲ್ಲ. ಇದೆಲ್ಲ ನೋಡಿ ಜನ ಬದಲಾವಣೆ ಬೇಕು ಅಂತಿದ್ದಾರೆ. ಹೀಗಾಗಿಯೇ ನಾವು ಗ್ಯಾರೆಂಟಿ ಸಹಿ ಹಾಕಿ ಕಳುಹಿಸಿ ಕೊಡುತ್ತಿದ್ದೇವೆ ಎಂದು ಡಮ್ಮಿ ಚೆಕ್ನ್ನು ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು.
ಬಿಜೆಪಿಯಲ್ಲೂ ಗೊಂದಲಗಳಿವೆ: ನಾನು ಇಂಧನ ಸಚಿವನಾಗಿ ಆಗಿ ಕೆಲಸ ಮಾಡಿದ್ದೇನೆ. ಯಾವ ರೀತಿ ಉಚಿತವಾಗಿ ಕೊಡಬೇಕು ಅನ್ನೋದನ್ನ ತೋರಿಸುತ್ತೇನೆ. ಶೇ.90 ರಷ್ಟು ಮನೆಗಳಿಗೆ ಇದು ಉಪಯೋಗ ಆಗುತ್ತದೆ ಎಂದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಗೈರು ಹಾಜರಾದ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಎಲ್ಲ ನಾಯಕರನ್ನು ಕರೆದುಕೊಂಡು ಹೋಗಲು ಆಗಲ್ಲ. ಮೂರು ಜನರ ಮೇಲೆ ಭಾಷಣಕ್ಕೆ ಅವಕಾಶ ಇಲ್ಲ. ರಮೇಶ್ ಕುಮಾರ್ ಅವರು ಕ್ಷೇತ್ರದಲ್ಲಿ ಇದ್ದಾರೆ. ಅಕ್ಕಪಕ್ಕದ ಕ್ಷೇತ್ರಗಳನ್ನ ನೋಡ್ತಿದ್ದಾರೆ.ಕೃಷ್ಣಬೈರೇಗೌಡ ಕ್ಷೇತ್ರದಲ್ಲಿ ಇದ್ದಾರೆ. ಎಲ್ಲರೂ ಎಲ್ಲ ಕಡೆ ಬರಲು ಆಗಲ್ಲ. ಸಿದ್ದರಾಮಯ್ಯ ಜತೆ ಎಲ್ಲರೂ ಹೋಗಲು ಆಗುತ್ತಾ? ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನೀವು ಸಹ ಅವರು ಬರಲಿಲ್ಲ ಅಂತ ತಲೆ ಕೆಡಿಸಿಕೊಳ್ಳುವುದು ಬೇಡ. ಬಿಜೆಪಿಯಲ್ಲೂ ಬಹಳ ಗೊಂದಲಗಳಿವೆ ಎಂದರು.
ರಥಯಾತ್ರೆ ಬಗ್ಗೆ ಡಿಕೆಶಿ ವ್ಯಂಗ್ಯ: ಬಿಜೆಪಿ ರಥಯಾತ್ರೆ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು. ರಥ ಯಾತ್ರೆಯಾದರೂ ಮಾಡಲಿ, ಹೆಲಿಕಾಪ್ಟರ್ ಯಾತ್ರೆಯಾದರೂ ಮಾಡಲಿ, ಏನು ಆಗಲ್ಲ. ನಾವು ಜನರ ಹೃದಯದಲ್ಲಿ ಇದ್ದೇವೆ. ಅವರು ಅವಕಾಶದಲ್ಲಿ ಇರ್ತಾರೆ ಎಂದು ಹೇಳಿದರು.
ವೈಯಕ್ತಿಕ ಆಹ್ವಾನ: ನಟ ಸುದೀಪ್ ಭೇಟಿ ವಿಚಾರವಾಗಿ ಮಾತನಾಡಿದ ಡಿಕೆಶಿ, ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ. ನಮಗೆ ವೈಯಕ್ತಿಕ ಆಹ್ವಾನ ಇತ್ತು. ಫಿಲಂ ಚೇಂಬರ್, ಕಲಾವಿದರ ಲೀಡ್ ತಗೊಳ್ಳಿ ಅಂತಾ ಹೇಳಿದ್ದೀನಿ. ನಮ್ಮ ಮ್ಯಾನಿಫೆಸ್ಟೋ(ಪ್ರಣಾಳಿಕೆ) ದಲ್ಲಿ ಅವರಿಗೆ ಸಹಾಯ ಮಾಡ್ತೀವಿ. ಸುದೀಪ್ ಸಹೋದರಿಗೆ ಕೈ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಇಲ್ಲ ಅಂತಾ ಕೈ ಸನ್ನೆ ಮಾಡಿ ಹೊರಟರು.
ಸಿದ್ದರಾಮಯ್ಯ ಯಾತ್ರೆ: ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ ಶ್ರೀ ಚನ್ನಬಸವ ಪಟ್ಟದೇವರ ಗದ್ದುಗೆ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಬೈರತಿ ಸುರೇಶ್, ಪ್ರಕಾಶ್ ರಾಥೋಡ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹಾಜರಿದ್ದರು. ಇಂದು ಇಲ್ಲಿಂದಲೇ ಸಿದ್ದರಾಮಯ್ಯ ತಮ್ಮ ಬಸ್ ಯಾತ್ರೆ ಆರಂಭಿಸಲಿದ್ದಾರೆ.
ಇದನ್ನೂ ಓದಿ: ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇವೆ: ಸಿದ್ದರಾಮಯ್ಯ