ಬೆಂಗಳೂರು: ನಗರದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡ ಆತ್ಮೀಯ ಕ್ಷಣ ಕಳೆದರು. ಸಾಮಾನ್ಯವಾಗಿ ಇಬ್ಬರ ನಡುವೆ ಆತ್ಮೀಯತೆ ಇಲ್ಲ ಎನ್ನುವ ಮಾತೇ ಕೇಳು ಬರುತ್ತಿರುವ ಸಂದರ್ಭದಲ್ಲಿ, ಅದರಲ್ಲೂ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ಇಬ್ಬರೂ ಕೈ ನಾಯಕರು ಒಟ್ಟಾಗಿ ಆತ್ಮೀಯ ಕ್ಷಣ ಕಳೆದಿರುವುದು ವಿಶೇಷ ಒಗ್ಗಟ್ಟು ಪ್ರದರ್ಶಿಸಿರುವುದು ಪಕ್ಷದ ಕಾರ್ಯಕರ್ತರಿಗೆ ವಿಶೇಷ ಸಂದೇಶ ರವಾನೆ ಮಾಡಿದೆ.
ಸದಾ ಪಕ್ಷದ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳಲು, ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಆಗಲು ಈ ಇಬ್ಬರೂ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಆದರೆ, ಇಬ್ಬರ ನಡುವೆ ಇಷ್ಟೊಂದು ಆತ್ಮೀಯತೆ ಇದೆ ಎನ್ನುವುದು ಇದುವರೆಗೂ ಎಲ್ಲಿಯೂ ಕಾಣಸಿಕ್ಕಿರಲಿಲ್ಲ. ಇಂದು ಖಾಸಗಿ ಸಮಾರಂಭದಲ್ಲಿ ಇಬ್ಬರೂ ಕೂಡಿ ಕಳೆದ ಕ್ಷಣ ರಾಜ್ಯದ ಮತದಾರರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಶೇಷ ಸಂದೇಶ ರವಾನೆ ಮಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಆರೋಪಿಸುತ್ತಿದ್ದ ಬಿಜೆಪಿ ಆಪಾದನೆಗೆ ಅಪವಾದ ಎಂಬಂತೆ ಇಬ್ಬರೂ ನಾಯಕರು ನಡೆದುಕೊಂಡಿರುವುದು ಬಿಜೆಪಿ ನಾಯಕರ ಬಾಯಿ ಮುಚ್ಚಿಸುವಂತೆ ಮಾಡಿದೆ. ಡಿಕೆಶಿ - ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿ ಇಲ್ಲ ಎಂದು ಆಪಾದನೆ ಮಾಡುತ್ತಿದ್ದ ಬಿಜೆಪಿ ನಾಯಕರು ಸುಮ್ಮನಾಗಿಸುವ ಸನ್ನಿವೇಶ ಶನಿವಾರ ನಿರ್ಮಾಣವಾಗಿದೆ.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಒಗ್ಗಟ್ಟು ಪ್ರದರ್ಶನ ಮಾಡಿ, ಇದು ಮತದಾರರ ಮನಸ್ಸಿನಲ್ಲಿ ಧನಾತ್ಮಕ ಪ್ರಚೋದನೆ ಉಂಟು ಮಾಡುತ್ತದೆ. ರಾಜ್ಯ ಕಾಂಗ್ರೆಸ್ನ ಒಗ್ಗಟ್ಟು ಪ್ರದರ್ಶಿಸಿ ಎಂದು ಪಕ್ಷದ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ. ಇದರ ಪ್ರಕಾರವೇ ಅವಕಾಶ ಸಿಕ್ಕಲ್ಲೆಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ.
ಸಾಮಾನ್ಯವಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷರಾಗಿರುವವರಿಗೆ ಸಿಎಂ ಸ್ಥಾನ ನೀಡುವ ಸಂಪ್ರದಾಯ ಇತ್ತು. ಆದರೆ ಈಚಿನ ವರ್ಷಗಳಲ್ಲಿ ಅದು ದೂರವಾಗಿದೆ. ಹೆಚ್ಚು ಶಾಸಕರ ಬೆಂಬಲ ಇರುವ ನಾಯಕರಿಗೆ ಸಿಎಂ ಸ್ಥಾನ ಸಿಗಲಿದೆ. ಇದೇ ಮಾನದಂಡದ ಮೇಲೆ ಹೆಚ್ಚು ಶಾಸಕರ ಒಲವು ಹೊಂದಿರುವ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮದೇ ಆದ ನಿಟ್ಟಿನಲ್ಲಿ ಪೈಪೋಟಿ ನಡೆಸಿದ್ದಾರೆ. ಇದೀಗ ಇಬ್ಬರ ನಡುವೆ ಸ್ಪರ್ಧೆ ಇರುವುದು ಅರಿವಾದರೆ ಜನ ಯಾವ ವಿಧದ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗದು. ಸಾಧ್ಯವಾದಷ್ಟು ಒಗ್ಗಟ್ಟು ಪ್ರದರ್ಶಿಸಿ ಎಂದು ರಾಷ್ಟ್ರೀಯ ನಾಯಕರು ಸಲಹೆ ನೀಡಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಸ್ಥಾನಕ್ಕೆ ಸೂಕ್ತ ಅನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಅಲ್ಲಿವರೆಗೂ ಎಷ್ಟೇ ಆಕಾಂಕ್ಷೆ ಇದ್ದರೂ ಹತ್ತಿಕ್ಕಿಕೊಳ್ಳಿ ಎಂದು ಸಲಹೆ ನೀಡಲಾಗಿದೆ. ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಸಹ ಇದೇ ಸಲಹೆ ನೀಡಿ ತೆರಳಿದ್ದು, ಇದನ್ನು ರಾಜ್ಯ ನಾಯಕರು ಪಾಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಖಾಸಗಿ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ ಆರಂಭ: ಬಂಡಾಯ, ಲಿಂಗಾಯತ ವಿರೋಧಿ ಅಸ್ತ್ರದ ಕುರಿತು ಚರ್ಚೆ..!