ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ, ಮತಿಭ್ರಮಣೆಯಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನು ನಿಮ್ಹಾನ್ಸ್ ಅಥವಾ ಬೇರೆ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ ಅವರು ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಬಿಜೆಪಿ ನಾಯಕರು ಕೂಡಲೇ ರವಿ ಅವರನ್ನು ಆಸ್ಪತ್ರೆಗೆ ಸೇರಿಸಲಿ ಎಂದು ಸಲಹೆ ನೀಡುತ್ತೇನೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಈ ಹಿಂದೆ ಬಿಜೆಪಿಯ ಮತ್ತೊಬ್ಬ ಮೆಂಟಲ್ ಗಿರಾಕಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಆದರ ವಿಚಾರಣೆ ನಡೆಯುತ್ತಿದೆ. ಆದರೆ, ಬೇರೆ ಪ್ರಕರಣಗಳಲ್ಲಿ ಆತುರವಾಗಿ ಶಿಕ್ಷೆ ಪ್ರಕಟವಾಗುತ್ತದೆ. ಹೀಗಾಗಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ : ಮಾಜಿ ಸಿಎಂ ಕುಮಾರಸ್ವಾಮಿ ದೃಷ್ಠಿಯಲ್ಲಿ ಒನಕೆ ಓಬವ್ವ ಮಾಡಿದ್ದು ಅಪರಾಧವಾಗುತ್ತೆ: ಸಿ ಟಿ ರವಿ
ರವಿ ಹೇಳಿದ್ದೇನು? : ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿ ಎರಡನೇ ಹಂತದ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಟಿ ರವಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದುರಾಡಳಿತದ ದಿನಗಳ ಬರಲಿವೆ. ರಾಜ್ಯದ ಊರು ಊರುಗಳಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗೋದು ಗ್ಯಾರಂಟಿ. ಈ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡುವವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ. ಆಗ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಡಿ ಕೆ ಶಿವಕುಮಾರ್ ಅವ್ರು ನಮ್ಮ ಬ್ರದರ್ಸ್ ಬಹಳ ಇನೋಸೆಂಟ್ ಅಂತ ಹೇಳ್ತಾರೆ ಅಂತ ಟೀಕೆ ಮಾಡಿದ್ದರು.
ಇದನ್ನೂ ಓದಿ : ಉಗ್ರರ ಪರ ಹೇಳಿಕೆ ಕೊಡಲು ನನಗೇನು ತಲೆ ಕೆಟ್ಟಿದೆಯಾ?-ಡಿಕೆಶಿ, ಕ್ಷಮೆ ಕೇಳುವಂತೆ ಸಿ.ಟಿ.ರವಿ ಆಗ್ರಹ
ಇನ್ನು ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಭಯೋತ್ಪಾದನಾ ಚಟುವಟಿಕೆಗೆ ಕಾಂಗ್ರೆಸ್ ಬೆಂಬಲವಾಗಿ ನಿಂತು ರಕ್ಷಿಸುತ್ತಿದೆ. ಅವರ ಅವಧಿಯಲ್ಲಿ ಹೆಚ್ಚು ಮತೀಯ ಗಲಭೆ ಪ್ರಕರಣಗಳು ನಡೆದಿವೆ ಎಂದು ಹೇಳಿದ್ದರು. ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ ಕೊಟ್ಟಿದೆ. ಅವರ ತುಷ್ಟೀಕರಣ ನೀತಿಯಿಂದಾಗಿ ಅವರ ಅಧಿಕಾರಾವಧಿಯಲ್ಲಿ ಮತೀಯ ಗಲಭೆಗಳು ಹೆಚ್ಚಾಗಿತ್ತು. ಮಂಗಳೂರಿನ ಕುಕ್ಕರ್ ಬ್ಲಾಸ್ಟ್ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ನವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತವರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದರು. ಇವತ್ತಿಗೂ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿಲ್ಲ. ಪಿಎಫ್ಐ, ಕೆಎಫ್ಡಿಯನ್ನ ನಿಷೇಧ ಮಾಡಿದರೂ ಪ್ರಶ್ನಿಸುತ್ತಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಆಡಳಿತಕ್ಕೆ ಬಂದಾಗೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ: ಕಟೀಲ್