ಬೆಂಗಳೂರು: ಬಜೆಟ್ನಲ್ಲಿ ದೂರ ದೃಷ್ಟಿ ಇರಬೇಕು. ಎಲ್ಲಾ ವರ್ಗಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಈ ಬಜೆಟ್ನಲ್ಲಿ ಏನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಸಿಎಂ ಬಜೆಟ್ ಮಂಡಿಸಿದ್ದಾರೆ. ಇದು ಅವರ ಮೊದಲ ಹಾಗೂ ಕೊನೆಯ ಬಜೆಟ್. ಸಿಎಂ ಮಾತಿನಲ್ಲೇ ಇದು ಅರ್ಥವಾಗುತ್ತಿತ್ತು. ಸಿಎಂ ಭಾಷಣ ಸ್ಫೂರ್ತಿಯಾಗಿರಬೇಕಿತ್ತು. ಅವರ ಭಾವನೆ ಜಾರಿಗೆ ತರುವುದು ಕಷ್ಟ ಎನ್ನುವಂತಿತ್ತು. ಬಜೆಟ್ ಮಂಡಿಸುವಾಗ ಅವರ ಸ್ವರ ಹೇಗಿತ್ತು ಅಂತ ನೋಡಿದ್ರಲ್ವಾ? ಪಾಪ ಮುಂದಿನ ಚುನಾವಣೆಗೆ ಅವರ ನೇತೃತ್ವ ಅಂತ ಹೇಳಿಬಿಟ್ಟವರೆ. ಆದ್ರೆ ಅವರ ಮಾತಿನಲ್ಲಿ ಆತ್ಮಸ್ಥೈರ್ಯವೇ ಇರಲಿಲ್ಲ ಎಂದರು.
ನಾವು ಪಾದಯಾತ್ರೆ ಮುಗಿಸಿ ಬಂದಿದ್ದೇವೆ. ಅವರು ಸಾಕಷ್ಟು ಟೀಕೆಗಳನ್ನ ಮಾಡಿದ್ದರು. ಪಾದಯಾತ್ರೆಯಿಂದ ಏನೂ ಪ್ರಯೋಜನವಿಲ್ಲ ಎಂದಿದ್ದರು. ಹಾಗಾದ್ರೆ ಯಾಕೆ 1000 ಕೋಟಿ ಇಟ್ಟಿದ್ದು?. ಅಂದ್ರೆ, ಇದು ನಮ್ಮ ಹೋರಾಟ ಒಪ್ಪಿಕೊಂಡಂತೆ. ಮೇಕೆದಾಟು ಯೋಜನೆ ಯಾವಾಗ ಎತ್ತಿಕೊಳ್ತೀರಾ? ಪರಿಸರ ಕ್ಲಿಯರೆನ್ಸ್ ಯಾವಾಗ? ಟೆಂಡರ್ ಯಾವಾಗ ಹೊರಡಿಸುತ್ತೀರಾ?ಇದರ ಬಗ್ಗೆ ಜನ ಕೂಡ ಕಾಯ್ತಿದ್ದಾರೆ. ಎಲ್ಲ ಜಾತಿ, ಧರ್ಮವನ್ನು ಒಟ್ಟಿಗೆ ಕೊಂಡೊಯ್ತೇವೆ ಎಂದಿದ್ದೀರಿ. ಈ ಬಜೆಟ್ ಸಂವಿಧಾನ ವಿರುದ್ಧವಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರನ್ನು ನೋಡ್ತಿರುವ ದೃಷ್ಟಿ ಬೇರೆಯಾಗಿದೆ. ನಾವು 3,000 ಕೋಟಿ ಹಣ ಮೀಸಲಿಟ್ಟಿದ್ದೆವು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇಟ್ಟಿದ್ದೆವು. ಆದರೆ ಅವರ ಕಲ್ಯಾಣಕ್ಕೆ ಕೊಟ್ಟಿರುವ ಹಣವೆಷ್ಟು? ಜೈನ, ಬೌದ್ಧ, ಸಿಖ್ ಸಮುದಾಯಕ್ಕೆ ಕೊಟ್ಟ ಹಣ ಸಾಕೇ? ಅವರ ಮನಸ್ಸಿಗೆ ನೀವು ನೋವುಂಟುಮಾಡಿದ್ದೀರಿ. ಎಸ್ಸಿ, ಎಸ್ಟಿ, ಒಬಿಸಿಗೆ ಹೆಚ್ಚಿನ ಹಣ ಇಡಲಾಗಿತ್ತು. ನೀವು ಅವರ ಎಲ್ಲಾ ಅನುದಾನ ಕಡಿತ ಮಾಡಿದ್ದೀರಿ ಎಂದರು.
ಇದನ್ನೂ ಓದಿ: ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಏನು?
ವಿದ್ಯಾವಂತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ಮಾತೇ ಇಲ್ಲ. ರೈತರ ಬಜೆಟ್ ಯಡಿಯೂರಪ್ಪ ಕೊಟ್ಟಿದ್ರು. ರೈತರ ಆದಾಯ ಡಬಲ್ ಮಾಡ್ತೇವೆ ಎಂದಿದ್ರು. ಹೇಗೆ ಆದಾಯ ಡಬಲ್ ಮಾಡಿದ್ದೀರಿ ಹೇಳಿ. ಮಿನಿಮಮ್ ಸಪೋರ್ಟ್ ಪ್ರೈಸ್ ತಂದಿದ್ದೀರಿ. ಎಲ್ಲದಕ್ಕೂ ಎಂಆರ್ಪಿ ದರವಿದೆ. ರೈತರ ಬೆಳೆಗೆ ಯಾಕೆ ಎಂಆರ್ಪಿ ದರವಿಲ್ಲ. ಎಲ್ಲಾ ತರಕಾರಿ, ಹಣ್ಣು, ಬೆಳೆಗಳಿಗೆ ಎಂಆರ್ ಪಿ ಮಾಡಿ. ನೀವು ರೈತರ ಫಸಲನ್ನ ಕೊಂಡು ಕೊಳ್ಳಿ. ಇಲ್ಲವೇ ಅವರಿಗೆ ನೆರವನ್ನಾದ್ರೂ ಕೊಡಿ. ಏನೂ ಮಾಡೋಕೆ ಆಗಲ್ಲ ಅಂದ್ರೆ ಹೇಗೆ ಎಂದು ಹೇಳಿದರು.
ಕೇವಲ ಕೋಮುವಾದ ಮಾತ್ರ ಮಾಡ್ತೀರಿ. ನವೆಂಬರ್ನಲ್ಲಿ ಬಂಡವಾಳ ಮಾಡ್ತೇವೆ ಎಂದಿದ್ದೀರಾ. ಇಲ್ಲಿ ಹೂಡಿಕೆ ಮಾಡೋಕೆ ಯಾರು ಬರ್ತಾರೆ? ಶಿವಮೊಗ್ಗ, ಅಳಂದದಲ್ಲಿ ಏನೇನು ಮಾಡಿದ್ರಿ? ಎಲ್ಲವೂ ರಾಜ್ಯದ ಜನರಿಗೆ ಗೊತ್ತಾಗಿದೆ. ಜನರನ್ನು ಉಳಿಸೋಕೆ ನಿಮ್ಮ ಕೈಯಲ್ಲಿ ಆಗ್ತಿಲ್ಲ ಎಂದರು.