ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ವೈದ್ಯ ಘಟಕದ ಜತೆ ಶನಿವಾರ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಅಜಯ್ ಸಿಂಗ್, ಡಾ.ಬಿ.ಕೆ ಮಧುಸೂಧನ್, ಡಾ.ಶಂಕರ್ ಗುಹಾ, ಡಾ.ಉಮೇಶ್ ಹಾಗೂ ವೈದ್ಯ ಘಟಕದ ಸದಸ್ಯರಿದ್ದರು.
ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಜಯ್ ಸಿಂಗ್ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಆರೋಗ್ಯ ಹಸ್ತ ಸಮಿತಿ ರಚಿಸಿದೆ. ಕೊರೊನಾ ಮಹಾಮಾರಿಯನ್ನು ಎದುರಿಸುವ ಸಲುವಾಗಿ ಪಕ್ಷ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದರಲ್ಲಿ ಕೊರೊನಾ ವಾರಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಕಾರ್ಯಕರ್ತರಿಗೆ ಆರೋಗ್ಯವಿಮೆ ಮಾಡಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಸಮಿತಿ, ಶಾಸಕರು ಮತ್ತು 2018ರ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಪಟ್ಟಿಯನ್ನು ತಯಾರಿಸಲಾಗಿದೆ. ಇಂದು ಸಮಿತಿಯ ಕಾರ್ಯ ನಿರ್ವಹಣೆ ಹಾಗೂ ಜವಾಬ್ದಾರಿಯ ಕುರಿತು ಮನವರಿಕೆ ಮಾಡಿಕೊಡುವ ಕಾರ್ಯವನ್ನು ಡಿಕೆಶಿ ಮಾಡಿದರು.
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಇದೀಗ ವಿಶೇಷ ಸಮಿತಿಯನ್ನು ರಚಿಸಿ ಈ ಮೂಲಕ ಜನಸೇವೆಗೆ ಮುಂದಾಗಿದೆ. ಈ ಕಾರ್ಯದಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ನೋಡಿಕೊಳ್ಳುವಂತೆ ಡಿಕೆಶಿ ಎಚ್ಚರಿಸಿದರು.