ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ರಾತ್ರಿ ಸ್ಯಾಂಡಲ್ವುಡ್ನ ನಟ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿ, ಡಿನ್ನರ್‌ನಲ್ಲಿ ಪಾಲ್ಗೊಂಡಿದ್ದಾರೆ. ಸುದೀಪ್ ಕಾಂಗ್ರೆಸ್ ಸೇರುವ ಬಗ್ಗೆ ಇತ್ತೀಚೆಗೆ ಸುದ್ದಿ ಹರಿದಾಡುತಿತ್ತು. ಇದೀಗ ಡಿಕೆಶಿ, ಕಿಚ್ಚ ಸುದೀಪ್ ಮನೆಗೆ ಬಂದು ಅವರನ್ನು ಭೇಟಿಯಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ, ನಟಿ ರಮ್ಯಾ ಅವರು ಸುದೀಪ್ ಅವರೊಂದಿಗೆ ರಾಜಕೀಯ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿತ್ತು. ಇದೀಗ ಡಿಕೆಶಿ ಅವರು ಕೂಡಾ ಸುದೀಪ್ ಮನೆಯಲ್ಲಿ ತುಂಬ ಹೊತ್ತು ಕಾಲ ಕಳೆದು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಮಾತುಕತೆಯ ಯಾವುದೇ ವಿವರ ಲಭ್ಯವಾಗಿಲ್ಲ. ಡಿಕೆಶಿ ಅವರು ಸುದೀಪ್ರನ್ನು ಕಾಂಗ್ರೆಸ್ಗೆ ಆಹ್ವಾನಿಸಿದ್ದಾರೆ ಎಂಬ ಮಾತುಗಳಿವೆ. ಇದರ ಜೊತೆಗೆ, ಚುನಾವಣೆ ಪ್ರಚಾರಕ್ಕೆ ಬರುವಂತೆಯೂ ಆಹ್ವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಇದೊಂದು ಒಂದು ಫ್ರೆಂಡ್ಲೀ ವಿಸಿಟ್ ಅಷ್ಟೇ.
ಸುದೀಪ್ ಎಲ್ಲ ರಾಜಕೀಯ ಪಕ್ಷಗಳು, ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳೂ ಇದ್ದವು. ನಟನನ್ನು ಪಕ್ಷಕ್ಕೆ ಸೆಳೆಯಲು ವಿವಿಧ ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿವೆ ಅನ್ನೋದು ಮಾತ್ರ ಸ್ಪಷ್ಪ. ಸುದೀಪ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ರಂಗದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಸುದೀಪ್ ಅವರನ್ನು ಪಕ್ಷಕ್ಕೆ ಸೇರಿಸಿ ಅವರ ಬೆಂಬಲಿಗರನ್ನು ಸೆಳೆಯುವುದು ಇಲ್ಲಿರುವ ಉದ್ದೇಶ.
ಇದನ್ನೂ ಓದಿ: ನನಗೆ ಸಚಿವ ಸ್ಥಾನ ಬೇಡ ಎಂದು ಸಿಎಂಗೆ ತಿಳಿಸಿದ್ದೇನೆ: ಕೆ.ಎಸ್.ಈಶ್ವರಪ್ಪ