ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಇಂದು ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಅಮರ್ತ್ಯ ಹೆಗ್ಡೆಯವರ ಕೈ ಹಿಡಿದರು.
ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕಾಫಿ ಡೇ ಮಾಲೀಕರಾದ ದಿ. ಸಿದ್ದಾರ್ಥ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹ ಗುರುಹಿರಿಯರ ನಿಶ್ಚಯದಂತೆ ಬೆಂಗಳೂರಿನ ವೈಟ್ ಫೀಲ್ಡ್ನ ಖಾಸಗಿ ಹೋಟೆಲ್ನಲ್ಲಿ ಒಕ್ಕಲಿಗ ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತವಾಗಿ ಜರುಗಿತು.
ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು. ವರ್ಷಗಳ ಹಿಂದೆಯೇ ಎರಡು ಕುಟುಂಬಗಳು ಸ್ನೇಹವನ್ನು ಸಂಬಂಧವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಇಂದು ಶುಭಗಳಿಗೆ ಕೂಡಿ ಬಂದಿದ್ದು, ಯುವ ದಂಪತಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ.
ಸಿಎಂ ಭಾಗಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು. ಸಿಎಂ ಕಾಲಿಗೆ ನಮಸ್ಕರಿಸಿದ ನವ ದಂಪತಿ ಅವರ ಆಶೀರ್ವಾದ ಪಡೆದರು. ಬಳಿಕ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಕೈ ಕುಲುಕಿದ ಯಡಿಯೂರಪ್ಪ ಕೆಲಕಾಲ ಅವರೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದರು.
ಸಮಾಜದ ವಿವಿಧ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ನಾಯಕರು ಸಾಕಷ್ಟು ಸಂಖ್ಯೆಯಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದರು. ನಾಳೆ ಪ್ರೆಸ್ಟೀಜ್ ಗಾಲ್ಫ್ ಶೈರ್ನಲ್ಲಿ ಆರತಕ್ಷತೆ ಜರುಗಲಿದ್ದು, ಫೆ.20 ರಂದು ಅರಮನೆ ಮೈದಾನದಲ್ಲಿ ಬೀಗರ ಔತಣ ನಡೆಯಲಿದೆ.