ಬೆಂಗಳೂರು: ಡಿ.ಜೆ.ಹಳ್ಳಿ ಹಾಗು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ತನಿಖೆ ನಡೆಯುತ್ತಿದೆ. ಇದೀಗ ಸಿಸಿಬಿ 1 ವಿಭಾಗದ ಕುಲ್ದೀಪ್ ಅವರ ಜಾಗಕ್ಕೆ ರವಿ ಕುಮಾರ್ ಅವರನ್ನು ಸರ್ಕಾರ ವರ್ಗಾಯಿಸಿದ್ದು, ಇಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಗಲಭೆ ವಿಚಾರ ಗೊತ್ತಾಗುತ್ತಿದ್ದ ಹಾಗೆ ಒಂಟಿಯಾಗಿ ಲಾಠಿ ಹಿಡಿದು ಫೇಸ್‌ಬುಕ್‌ನಲ್ಲಿ ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ಮುಖಕ್ಕೆ ಬಟ್ಟೆ ಕಟ್ಟಿ ಗಲಭೆ ಮಧ್ಯೆಯೇ ಬಂಧಿಸಿ ರವಿ ಕುಮಾರ್ ಸೈ ಎನಿಸಿಕೊಂಡಿದ್ದರು. ಹಾಗೆಯೇ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿಕೆ, ಮಾಜಿ ಮೇಯರ್ ಸಂಪತ್ ಕುಮಾರ್ ಪಿಎ ಅರುಣ್ ಹೇಳಿಕೆ, ಘಟನೆಯ ಪ್ರಮುಖ ಆರೋಪಿಗಳಾದ ಸಮೀಯುದ್ದೀನ್, ಮುಜಾಮಿಲ್ ಅವರ ತನಿಖೆಯನ್ನೂ ರವಿ ಅವರೇ ನಡೆಸುತ್ತಿದ್ದಾರೆ.
ಸರ್ಕಾರ ರವಿ ಕುಮಾರ್ ಕರ್ತವ್ಯ ದಕ್ಷತೆ ಪರಿಗಣಿಸಿ ಕೆಎಸ್ಪಿಎಸ್ ಬ್ಯಾಚ್‌ನಿಂದ ಬಡ್ತಿ ನೀಡಿದ್ದು, ನಗರದ ರೌಡಿ ಸ್ಕ್ವಾಡ್, ಗಾಂಜಾ, ಸೈಬರ್ ಪ್ರಕರಣ, ಸಿಸಿಬಿ ವಿಂಗ್‌ಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಿದೆ. ಈಗಾಗಲೇ ಸಬ್ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್, ಎಸಿಪಿಯಾಗಿ ಕರ್ತವ್ಯ ನಿಭಾಯಿಸಿರುವ ಅನುಭವ ರವಿ ಕುಮಾರ್ ಅವರಿಗಿದೆ.