ಬೆಂಗಳೂರು: ಮೈತ್ರಿ ಸರ್ಕಾರದ ಪತನದಲ್ಲಿ ನಿರ್ಣಾಯಕ ಪಾತ್ರವಹಿಸಿ, ದೋಸ್ತಿ ಪಕ್ಷಗಳಲ್ಲಿ ಆತಂಕ ಮೂಡಿಸಿದ್ದ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ, ಹೊಸ ಸರ್ಕಾರ ರಚನೆಗೂ ತೊಡಕಾಗಿದೆ. ಇದು ಬಿಜೆಪಿಗೂ ಭೀತಿ ಹುಟ್ಟಿಸಿದೆ.
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗುವ ಮುನ್ನ ಅಥವಾ ಅನರ್ಹತೆಯಾಗುವ ಮೊದಲು ಸರಕಾರ ರಚಿಸಿದರೆ ಬಿಜೆಪಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನಂತರ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿರುವ ಬಿಜೆಪಿಗೆ, ಅತೃಪ್ತ ಶಾಸಕರ ಪ್ರಕರಣ ಬ್ರೇಕ್ ಹಾಕಿದೆ. ಅತೃಪ್ತರ ರಾಜೀನಾಮೆ ಪ್ರಕರಣದ ಬಗ್ಗೆ ಸ್ಪೀಕರ್ ತೀರ್ಮಾನ ತಗೆದುಕೊಳ್ಳುವ ತನಕ ಬಿಜೆಪಿ ಸರ್ಕಾರ ರಚಿಸುವುದು ದುಸ್ತರವಾಗಿದೆ. ಸ್ಪೀಕರ್ ರಮೇಶ ಕುಮಾರ್, ಶಾಸಕ ಸ್ಥಾನಕ್ಕೆ ಅತೃಪ್ತರು ನೀಡಿರುವ ರಾಜೀನಾಮೆ ತಿರಸ್ಕಾರ ಮಾಡಿದರೆ ರಾಜೀನಾಮೆ ನೀಡಿದ ಬಂಡಾಯ ಶಾಸಕರು ಎಂಎಲ್ಎಗಳಾಗಿ ಮುಂದುವರಿಯಲಿದ್ದಾರೆ.
ಇದರಿಂದ ಸರ್ಕಾರ ರಚನೆ ಮಾಡಿದರೂ ಭವಿಷ್ಯದಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆ ಎದುರಾಗಿ ಬಹುಮತ ಕಳೆದುಕೊಳ್ಳುವ ಅಪಾಯವಿದೆ. ಅತೃಪ್ತರ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಬಿಜೆಪಿ105 ಶಾಸಕರ ಬಲ ಹೊಂದಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟವು ಸ್ಪೀಕರ್ ಸೇರಿದಂತೆ 100 ಸದಸ್ಯ ಬಲ ಹೊಂದಿದೆ. 15 ಶಾಸಕರು ರಾಜೀನಾಮೆ ನೀಡಿದ್ದಾರೆ. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮೈತ್ರಿ ಪಕ್ಷದ 5 ಜನ ಶಾಸಕರು ಗೈರಾಗಿ ಸರ್ಕಾರಕ್ಕೆ ತಮ್ಮ ಬೆಂಬಲವಿಲ್ಲವೆಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಅತೃಪ್ತರ ರಾಜೀನಾಮೆ ಬಗ್ಗೆ ವಿಧಾನ ಸಭಾದ್ಯಕ್ಷರು ತೀರ್ಪು ಕಾಯ್ದಿರಿಸಿದ್ದಾರೆ. ಒಂದೊಮ್ಮೆ ಶಾಸಕರ ರಾಜೀನಾಮೆ ಅಂಗೀಕಾರ ಮಾಡದಿದ್ದರೆ, ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಬಲ ಮೈತ್ರಿ ಪಕ್ಷದ ಬಲಕ್ಕಿಂತ ಕಡಿಮೆಯಾಗಲಿದೆ. ಬಿಜೆಪಿ ಶಾಸಕರು 105. ಆದರೆ, ಕಾಂಗ್ರೆಸ್ ಜೆಡಿಎಸ್ ಶಾಸಕರ ಸಂಖ್ಯೆ 115 ಆಗಲಿದೆ. ಆಗ ಬಿಜೆಪಿ ಸರ್ಕಾರ ರಚಿಸಿದರೂ, ಬಹುಮತ ಸಾಬೀತು ಪಡಿಸಲಾಗದೇ ಸರ್ಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ.