ಬೆಂಗಳೂರು: ಸ್ಪೀಕರ್ ಆದೇಶ ಈ ಚುನಾವಣೆಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿರುವ ಶಾಸಕರಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಅಕ್ಟೋಬರ್ 21ರಂದು ಉಪ ಚುನಾವಣೆ ನಡೆಯುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ಇನ್ನು ಈ ಚುನಾವಣೆಯಲ್ಲಿ ಈ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿ, ಸ್ಪೀಕರ್ ಆದೇಶದ ಮೇರೆ ಅನರ್ಹಗೊಂಡಿರುವ ಶಾಸಕರಿಗೆ ಸ್ಪರ್ಧಿಸುವಂತಿಲ್ಲ. ಮಸ್ಕಿ ಮತ್ತು ಆರ್ ಆರ್ ನಗರ ಕ್ಷೇತ್ರಗಳ ವಿಚಾರಗಳು ಹೈಕೋರ್ಟ್ ನಲ್ಲಿದೆ. ಚುನಾವಣಾ ತಕರಾರು ಅರ್ಜಿಗಳು ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ ಅಂತ ಮಾಹಿತಿ ನೀಡಿದರು.
ರಾಜ್ಯದ ಒಟ್ಟು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಅಕ್ಟೋಬರ್ 3ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, 24 ಕ್ಕೆ ಮತ ಎಣಿಕೆ ಮತ್ತು 27 ಅಕ್ಟೋಬರ್ ಒಳಗೆ ಎಲ್ಲಾ ಕ್ಷೇತ್ರಗಳ ಚುನಾವಣೆ ಮುಗಿಯಲಿದೆ ಎಂದು ತಿಳಿಸಿದರು.
ಈಗಾಗಲೇ ಚುನಾವಣೆಗೆ ಅಗತ್ಯವಾದ ವಿವಿಪ್ಯಾಟ್ ಮತ್ತು ಮತ ಯಂತ್ರಗಳನ್ನು ಹೊಂದಿಸಿಕೊಳ್ಳಲಾಗಿದ್ದು, ನೆರೆಯ ರಾಜ್ಯಗಳಿಂದಲೂ ತರಿಸಿದ್ದೇವೆ ಎಂದು ತಿಳಿಸಿದರು. ಇನ್ನು ಮತದಾರರು ತಮ್ಮ ಹೆಸರು ಮತಪಟ್ಟಿಯಲ್ಲಿ ಇರದಿದ್ರೆ ಕೂಡಲೇ ಪಟ್ಟಿಗೆ ಸೇರಿಸಬೇಕು. ಮಂಗಳವಾರದ ನಂತರ ನಾವೂ ಈ ವಿಚಾರದಲ್ಲಿ ಏನೂ ಮಾಡಲು ಸಾಧ್ಯವಾಗಲ್ಲ ಎಂದು ಹೇಳಿದರು.