ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಇದರಿಂದ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಆದ್ರೆ ಕಾನೂನು ತಜ್ಞರು ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಕಾಯ್ದೆ ತಿದ್ದುಪಡಿ ವಿರೋಧಿಸುತ್ತಿರುವ ರಾಜಕೀಯ ನಾಯಕರು ಮತ್ತು ರೈತ ಮುಖಂಡರ ನಿಲುವಿಗೆ ಹೆಸರು ಉಲ್ಲೇಖಿಸಲು ಇಚ್ಛಿಸದ ನಾಡಿನ ಹೆಸರಾಂತ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಿರುವ ಕಾಯ್ದೆಯ ಪ್ರಕಾರ ರೈತರಷ್ಟೇ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶವಿದ್ದು, ಅದಕ್ಕೂ ಕೆಲ ಮಿತಿಗಳಿವೆ. ಸರ್ಕಾರ ಇದೀಗ ಆ ಮಿತಿಗಳನ್ನು ಸಡಿಸಿಲಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ಅವಕಾಶವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಹಾಗಂತ ರೈತರು ಬಲವಂತವಾಗಿ ಕೃಷಿ ಭೂಮಿಯನ್ನು ಶ್ರೀಮಂತರಿಗೆ ಮಾರಾಟ ಮಾಡಿ ಎಂದಲ್ಲ. ವಿರೋಧಕ್ಕೆ ಕಾನೂನಿನ ಯಾವುದೇ ಬಲವಿಲ್ಲ ಎನ್ನುತ್ತಾರೆ.
ಮುಖಂಡರ ಅಸಮಾಧಾನಕ್ಕೆ ಕಾರಣವೇನು?:
ಕಾಯ್ದೆ ತಿದ್ದುಪಡಿ ವಿರೋಧಿಸುತ್ತಿರುವ ಮುಖಂಡರ ಅಸಮಾಧಾನಕ್ಕೆ ಕಾರಣ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79 ಮತ್ತು 80 ತಿದ್ದುಪಡಿ ಮಾಡುತ್ತಿರುವುದು. ಈಗಿರುವ ಸೆಕ್ಷನ್ 79 ಎ ಪ್ರಕಾರ ಕೃಷಿ ಭೂಮಿಯನ್ನು ಕೃಷಿಕರು ಮಾತ್ರ ಖರೀದಿಸಬಹುದು. ವಿವರಿಸಿ ಹೇಳುವುದಾದರೆ 2 ಲಕ್ಷಕ್ಕಿಂತ ಹೆಚ್ಚು ಕೃಷಿಯೇತರ ಆದಾಯ ಹೊಂದಿಲ್ಲದ, 1973-74ರಿಂದಲೂ ಕೃಷಿಯಲ್ಲಿ ತೊಡಗಿರುವವರು ಮಾತ್ರ ಕೃಷಿ ಭೂಮಿ ಖರೀದಿಸಬಹುದು. 79 ಬಿ ಪ್ರಕಾರ ಕೃಷಿಕರಲ್ಲದವರು ವ್ಯವಸಾಯದ ಭೂಮಿ ಖರೀದಿಸುವಂತಿಲ್ಲ. 79 ಸಿ ಪ್ರಕಾರ ಭೂಮಿ ಖರೀದಿಸುವ ವ್ಯಕ್ತಿ ತಾನು ಕೃಷಿಕ ಎಂಬುದನ್ನು ದಾಖಲೆಗಳಲ್ಲಿ ಸ್ಪಷ್ಟಪಡಿಸಬೇಕು. ಇನ್ನು ಸೆಕ್ಷನ್ 80ರ ಪ್ರಕಾರ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಮಾರುವಂತಿಲ್ಲ.
ಈ 79 ಮತ್ತು 80ನೇ ಸೆಕ್ಷನ್ಗಳಿಗೆ ತಿದ್ದುಪಡಿ ತಂದರೆ ಅಥವಾ ಈ ನಿಯಮಗಳನ್ನು ಮುಕ್ತಗೊಳಿಸಿದರೆ ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು. ಹಾಗೆಯೇ ತಿದ್ದುಪಡಿಯಲ್ಲಿ 5 ಮಂದಿ ಸದಸ್ಯರಿರುವ ಕುಟುಂಬವೊಂದು ಮಳೆಯಾಶ್ರಿತ ಭೂಮಿಯಲ್ಲಿ 108 ಎಕರೆವರೆಗೂ, ನೀರಾವರಿ ಭೂಮಿಯಾದಲ್ಲಿ 54 ಎಕರೆವರೆಗೂ ಖರೀದಿಸಬಹುದು. ಹೀಗೆ ಭೂಮಿ ಖರೀದಿಸಲು ಅವಕಾಶ ನೀಡಿದಾಕ್ಷಣ ಕೃಷಿಕರು ತಮ್ಮ ಭೂಮಿಯನ್ನು ಮಾರಲೇಬೇಕೆಂದು ಅರ್ಥ ಬರುವುದಿಲ್ಲ. ನಿಜಕ್ಕೂ ಕೃಷಿಯಲ್ಲಿ ಆದಾಯ ಪಡೆಯುತ್ತಿರುವ, ಸಮೃದ್ಧಿ ಕಾಣುತ್ತಿರುವ ರೈತರು ಭೂಮಿಯನ್ನು ಮಾರುವುದಿಲ್ಲ. ಹೀಗಿದ್ದ ಮೇಲೆ ವಿರೋಧವೇಕೆ ಎನ್ನುತ್ತಾರೆ ಹಿರಿಯ ವಕೀಲರು.
ಆಹಾರದ ಕೊರತೆ ಎದುರಾಗಬಾರದು ಎಂದಾದರೆ ಕೃಷಿ ಭೂಮಿ ಕೃಷಿಗಷ್ಟೇ ಮೀಸಲಿರಬೇಕು ಮತ್ತು ಸಣ್ಣ, ಅತಿ ಸಣ್ಣ ರೈತರ ಶೋಷಣೆ ಆಗಬಾರದು ಎಂಬ ನಿಟ್ಟಿನಲ್ಲಿ ಕಾಯ್ದೆಯಲ್ಲಿ 79, 80ರ ನಿಯಮಗಳನ್ನು ಸೇರಿಸಲಾಗಿತ್ತು. ಆದರೆ ಪ್ರಸ್ತುತ ರಾಜ್ಯದಲ್ಲಿ ಸಾವಿರಾರು ಎಕರೆ ಮಳೆ ಆಧಾರಿತ ಕೃಷಿ ಭೂಮಿಗಳು ಉಳುಮೆಯಾಗದೆ, ನೀರಾವರಿ ಸೌಲಭ್ಯಗಳಿಲ್ಲದೆ, ಮೂಲ ಸೌಕರ್ಯಗಳಿಲ್ಲದೆ ಪಾಳು ಬಿದ್ದಿವೆ. ರಸಗೊಬ್ಬರ, ಕೀಟನಾಶಕಗಳ ಹೆಚ್ಚಿನ ಬಳಕೆಯಿಂದಾಗಿ ಭೂಮಿಯ ಫಲವತ್ತತೆಯೂ ಕುಸಿದಿದೆ. ಸಾವಯವ ಮತ್ತು ಸಹಜ ಕೃಷಿ ಬಗ್ಗೆ ರೈತರಿಗೆ ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜವಾಗಿಲ್ಲ.
ರೈತರ ವಿರುದ್ಧ 80 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು:
ಸೆಕ್ಷನ್ 79 ಮತ್ತು 80 ನಿಯಮಗಳನ್ನು ಉಲ್ಲಂಘಿಸಿ ಕೃಷಿ ಭೂಮಿ ಮಾರಾಟ ಮಾಡಿದ ಆರೋಪದಡಿ ರಾಜ್ಯದ ರೈತರ ವಿರುದ್ಧ 80 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಭೂಮಿ ಖರೀದಿಸಿದ ಶ್ರೀಮಂತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಗ್ರಾಮ ಲೆಕ್ಕಿಗನಿಂದ ಹಿಡಿದು ಉಪ ವಿಭಾಗಾಧಿಕಾರಿಯವರೆಗೆ ರೈತರನ್ನು ಶೋಷಣೆ ಮಾಡಿದ ಅಧಿಕಾರಿಗಳು ಉಳ್ಳವರಿಗೆ ಸಲೀಸಾಗಿ ಭೂಮಿ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ. ಪ್ರಸ್ತುತ ಕಾಯ್ದೆ ತಿದ್ದುಪಡಿ ವಿರೋಧಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಆಗಿನ ಸರ್ಕಾರ 2015ರಲ್ಲಿ ಕೃಷಿ ಭೂಮಿ ಖರೀದಿಗೆ ಇದ್ದ 2 ಲಕ್ಷ ಕೃಷಿಯೇತರ ಆದಾಯ ಮಿತಿಯನ್ನು 25 ಲಕ್ಷಕ್ಕೆ ಹೆಚ್ಚಿಸಿತ್ತು. ಆ ಬಳಿಕ ಹೆಸರಿಗಷ್ಟೇ ರೈತರಾದ ಸಾಕಷ್ಟು ಸಿರಿವಂತರು ಕೃಷಿ ಭೂಮಿ ಖರೀದಿಸಿದ್ದರು.
ವಿರೋಧ ಪಕ್ಷಗಳು ಮತ್ತು ರೈತ ಮುಖಂಡರು ವಿರೋಧಿಸುತ್ತಿರುವುದನ್ನು ಕಂಡು ರೈತರೂ ತಮಗೆ ಅನ್ಯಾಯವಾಗುತ್ತಿದೆ ಎಂದುಕೊಳ್ಳುತ್ತಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದಂತೆಯೇ ಕೃಷಿ ಜಮೀನಿಗೂ ಸಿರಿವಂತರನ್ನು ತಂದು ಕೂರಿಸುತ್ತಿದ್ದಾರೆ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಆದರೆ ಇದು ವಾಸ್ತವವಲ್ಲ. ಕೃಷಿ ಬಗ್ಗೆ ನಿಜಕ್ಕೂ ಆಸಕ್ತಿ ಇರುವ ರೈತರಿಗೆ ತಿದ್ದುಪಡಿಯಿಂದ ಯಾವುದೇ ಸಮಸ್ಯೆ ಇಲ್ಲ. ಬದಲಿಗೆ ಕೃಷಿ ಕ್ಷೇತ್ರದಲ್ಲಿ ಒಲವಿಲ್ಲದ ರೈತರ ಭೂಮಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇವೆಲ್ಲವನ್ನೂ ಮನಗಂಡೇ ರಾಜ್ಯ ಸರ್ಕಾರ ನೆರೆ ರಾಜ್ಯಗಳಂತೆ ತನ್ನ ಕಾಯ್ದೆಗೂ ತಿದ್ದುಪಡಿ ತಂದು ಕೃಷಿ ಬಗ್ಗೆ ಆಸಕ್ತಿ ಇರುವ ಜನರಿಗೆ ಭೂಮಿ ಕೊಳ್ಳಲು ಅವಕಾಶ ಮಾಡಿಕೊಡಲು ಮುಂದಾಗಿದೆ. ಮೋಲ್ನೋಟಕ್ಕೆ ಒಳ್ಳೆಯ ನಿರ್ಧಾರವೇ ಆಗಿದೆ. ಆದರೆ ಗುಣಮಟ್ಟದ ಕೃಷಿ ಭೂಮಿ ಆದಷ್ಟು ಕೃಷಿಗೆ ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ಜಾರಿ ಸರ್ಕಾರಕ್ಕಿರಬೇಕು ಎನ್ನುತ್ತಾರೆ ಕಾನೂನು ತಜ್ಞರು.