ಬೆಂಗಳೂರು: ಡಿ ಜೆ ಹಳ್ಳಿಯಲ್ಲಿ ನಡೆದ ಗಲಭೆ ವೇಳೆ ಅಮಾಯಕ ಜನರ ಆಸ್ತಿ-ಪಾಸ್ತಿಗಳಿಗೆ ನಷ್ಟವಾಗಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಕೂಲಿ ಕೆಲಸಗಾರರು, ಆಟೋ ಡ್ರೈವರ್ಸ್ ಹೀಗೆ ಬಡವರ ಮನೆ ಹಾಗೂ ವಸ್ತುಗಳು ಹಾಳಾಗಿವೆ. ಪಾಲಿಕೆಯಿಂದ ಪರಿಹಾರ ಕೊಡಿಸಿ ಎಂದು ಕಾವಲ್ ಭೈರಸಂದ್ರದ ಪಾಲಿಕೆ ಸದಸ್ಯೆ ನೇತ್ರ ನಾರಾಯಣ್ ಆಗ್ರಹಿಸಿದರು.
ಉತ್ತರ ಪ್ರದೇಶದ ನಿಯಮವನ್ನು ರಾಜ್ಯದಲ್ಲೂ ಜಾರಿಗೆ ತರಬೇಕು. ತಪ್ಪಿತಸ್ಥರಿಂದಲೇ ನಷ್ಟದ ಮೊತ್ತವನ್ನು ಭರಿಸಬೇಕು ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಒತ್ತಾಯಿಸಿದರು. ಇದಕ್ಕೆ ಉಮೇಶ್ ಶೆಟ್ಟಿ ಕೂಡ ಧ್ವನಿಗೂಡಿಸಿದರು.
ಇಂದು ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರು ನಾಳೆ ಇಡೀ ಊರಿಗೂ ಬೆಂಕಿ ಹಚ್ಚಲು ಹೇಸಲ್ಲವೆಂದು ಮುನೀಂದ್ರ ಕುಮಾರ್ ಹೇಳಿದರು. ಈ ವೇಳೆ ವಿಪಕ್ಷ ನಾಯಕ ವಾಜಿದ್ ಹಾಗೂ ಆಡಳಿತ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ನಷ್ಟ ಪರಿಹಾರದ ಬಗ್ಗೆ ಸರ್ಕಾರವೇ ಕ್ರಮ ಕೈಗೊಳ್ಳುತ್ತದೆ. ಇಲ್ಲಿ ಚರ್ಚೆ ಬೇಡ ಎಂದು ಮೇಯರ್ ಗೌತಮ್ ಕುಮಾರ್ ಸಭೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು.