ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಶಾಸಕರಿಗಾಗಿ ಭೋಜನಕೂಟ - Dinner for MLAs at Siddaramaiah residence
ಇಂದು ನಾಲ್ಕು ಗಂಟೆಯೊಳಗೆ ಅಧಿವೇಶನ ಅಂತ್ಯ ಆಗುತ್ತದೆ. ಅಂತ್ಯ ಮಾಡಿದ್ರೆ, ಅಹೋರಾತ್ರಿ ಧರಣಿ ಮಾಡಿದ್ರೆ ಪ್ರಯೋಜನವಿಲ್ಲ. ಎಲ್ಲರೂ ಕ್ಷೇತ್ರಗಳಿಗೆ ಹೋಗಬೇಕು. ಬೈ ಎಲೆಕ್ಷನ್ ಬೇರೆ ಇದೆ. ಅಲ್ಲಿಗೆ ಹೋಗಬೇಕು. ಒಂದು ವೇಳೆ ಅಧಿವೇಶನ ಮುಂದುವರಿದ್ರೆ ಅಹೋರಾತ್ರಿ ಧರಣಿ ಮಾಡೋಣ..
ಬೆಂಗಳೂರು : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇಂದು ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿದೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಏರ್ಪಡಿಸಲಾಗಿರುವ ಔತಣಕೂಟದಲ್ಲಿ ಕೈ ಶಾಸಕರು, ಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಭಾಗಿಯಾಗಿದ್ದರು. ಕಾಂಗ್ರೆಸ್ ಮುಖಂಡರ ಜೊತೆ ನಡೆದ ಭೋಜನಕೂಟದ ಸಮಯದಲ್ಲಿ ಕಲಾಪದ ಬಗ್ಗೆ ಚರ್ಚೆ ನಡೆಯಿತು.
ಅಹೋರಾತ್ರಿ ಧರಣಿ ಬಗ್ಗೆ ಗಂಭೀರ ಚರ್ಚೆ : ಇಂದು ಅಹೋರಾತ್ರಿ ಧರಣಿ ಮಾಡಬೇಕೋ, ಬೇಡವೋ ಎಂಬ ಚರ್ಚೆ ನಡೆಯಿತು. ಇಂದು ಅಹೋರಾತ್ರಿ ಧರಣಿ ಮಾಡಬೇಕು ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಮುಖವಾಗಿ ಇದೇ ವಿಚಾರವನ್ನು ಚರ್ಚೆಗೆ ತೆಗೆದುಕೊಂಡರು.
ಅಧಿವೇಶನ ಮುಗಿದರೆ ಧರಣಿ ಬೇಡ : ಇದೇ ಸಂದರ್ಭ ಸಿದ್ದರಾಮಯ್ಯ ಮಾತನಾಡಿ, ಇವತ್ತು ಅಧಿವೇಶನ ಅಂತ್ಯ ಆಗುತ್ತದೆ. ಅಂತ್ಯವಾದ್ರೆ, ಹೇಗೆ ಅಹೋ ರಾತ್ರಿ ಧರಣಿ ಮಾಡುವುದು? ಈಗಾಗಲೇ ಎಲ್ಲಾ ವಿಧೇಯಕಗಳು ಮಂಡನೆ ಆಗಿವೆ. ವಿಧೇಯಕಗಳು ಅಂಗೀಕಾರ ಆಗಿವೆ.
ಹಾಗಾಗಿ, ಇಂದು ನಾಲ್ಕು ಗಂಟೆಯೊಳಗೆ ಅಧಿವೇಶನ ಅಂತ್ಯ ಆಗುತ್ತದೆ. ಅಂತ್ಯ ಮಾಡಿದ್ರೆ, ಅಹೋರಾತ್ರಿ ಧರಣಿ ಮಾಡಿದ್ರೆ ಪ್ರಯೋಜನವಿಲ್ಲ. ಎಲ್ಲರೂ ಕ್ಷೇತ್ರಗಳಿಗೆ ಹೋಗಬೇಕು. ಬೈ ಎಲೆಕ್ಷನ್ ಬೇರೆ ಇದೆ. ಅಲ್ಲಿಗೆ ಹೋಗಬೇಕು. ಒಂದು ವೇಳೆ ಅಧಿವೇಶನ ಮುಂದುವರಿದ್ರೆ ಅಹೋರಾತ್ರಿ ಧರಣಿ ಮಾಡೋಣ ಎಂದಿದ್ದಾರೆ.
ಓದಿ:ಸಿಡಿ ಸಿಡಿದ ಬೆನ್ನಲ್ಲೇ ಚಾರಿತ್ರ್ಯದ ಚಾಲೆಂಜ್ ಹಾಕಿದ ಸಚಿವ ಸುಧಾಕರ್..!
ಸಿದ್ದರಾಮಯ್ಯ ಮಾತಿಗೆ ಹೌದು ಎಂದಿರುವ ಉಳಿದ ಸದಸ್ಯರು, ಅಧಿವೇಶನ ಮುಂದುವರಿದ್ರೆ ಅಹೋರಾತ್ರಿ ಧರಣಿ, ಇಂದೇ ಅಂತ್ಯವಾದ್ರೆ ರಾತ್ರಿ ಧರಣಿಯಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಒಂದೊಮ್ಮೆ ಧರಣಿ ಅಂತ್ಯವಾದರೆ ಸಿದ್ದರಾಮಯ್ಯ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ತೀರ್ಮಾನಿಸಿದ್ದಾರೆ.
ಭೋಜನಕೂಟದ ವಿಶೇಷತೆ : ಇಂದು ಸಿದ್ದರಾಮಯ್ಯ ಅವರು ಶಾಸಕರಿಗೆ ಆಹ್ವಾನಿಸಿದ್ದ ಭೋಜನಕೂಟ ವಿಶೇಷವಾಗಿ ಗಮನಸೆಳೆಯಿತು. ಊಟದ ಮೆನು ವಿಶೇಷವಾಗಿತ್ತು. ಮುದ್ದೆ, ನಾಟಿ ಕೋಳಿ ಸಾರು, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಬಾಯ್ಲ್ಡ್‌ಎಗ್, ಅನ್ನ ಸಾಂಬಾರ್, ರಸಂ, ಮೊಸರು, ರಾಗಿ ರೊಟ್ಟಿ, ಹೋಳಿಗೆ, ಸಿಹಿಕಡುಬು, ಮಶ್ರೂಮ್ ಬಿರಿಯಾನಿ ಸೇರಿ ಹಲವು ಭಕ್ಷ್ಯಗಳಿದ್ದವು.