ಬೆಂಗಳೂರು : ಎಐಸಿಸಿ ನೂತನ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತರಾಗಿ ಹಾಗೂ ತಮಿಳುನಾಡು, ಪುದುಚೇರಿ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿಯಾಗಿ ನೇಮಕಗೊಂಡಿರುವ ದಿನೇಶ್ ಗುಂಡೂರಾವ್ ಇಂದು ದೆಹಲಿಯಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸಿದರು.
ಇಂದು ಬೆಳಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ರಾಷ್ಟ್ರೀಯ ನಾಯಕ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು. ಇದಾದ ಬಳಿಕ ಸಂಜೆ ರಾಜ್ಯದ ವಿವಿಧ ಶಾಸಕರ ಜೊತೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿ ನೂತನವಾಗಿ ನಿಯೋಜಿತರಾಗಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ದಿನೇಶ್ ಗುಂಡೂರಾವ್ ಅವರು ಇಂದು ಸಂಜೆ ಶಾಸಕರಾದ ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಲ್, ಕಂಪ್ಲಿ ಗಣೇಶ್ ಮತ್ತು ಇತರರ ಜೊತೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಪಕ್ಷದ ವತಿಯಿಂದ ಶುಭಾಶಯ ಸಲ್ಲಿಕೆ ಮಾಡಿದರು. ತಮ್ಮ ನೇಮಕಾತಿ ಕರ್ನಾಟಕ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹವನ್ನು ಸೃಷ್ಟಿಸಿದೆ. ಕರ್ನಾಟಕ ರಾಜ್ಯಕ್ಕೆ ತಮಗೆ ಸ್ವಾಗತ ಎಂದು ತಿಳಿಸಿದರು.
ಇದಕ್ಕೂ ಮುನ್ನ ಇಂದು ಬೆಳಿಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಸಂದರ್ಭ ತಾವು ಮಾಡಿದ ಕಠಿಣ ಮತ್ತು ಪ್ರಾಮಾಣಿಕ ಕೆಲಸಕ್ಕೆ ಧನ್ಯವಾದಗಳು. ತಮಗೆ ಹಿರಿಯ ಸಹೋದರನಂತೆ ಇದ್ದಿದ್ದು ಮಾತ್ರವಲ್ಲದೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನನಗೆ ಸಂಪೂರ್ಣ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ತಮಿಳುನಾಡು, ಪುದುಚೇರಿ ಮತ್ತು ಗೋವಾಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ದಿನೇಶ್ ಗುಂಡೂರಾವ್ ಇದೇ ಸಂದರ್ಭ ಚರ್ಚಿಸಿದರು. ಈ ರಾಜ್ಯಗಳಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಹಾಗೂ ಕಟ್ಟಿ ಬೆಳೆಸುವ ಕಾರ್ಯದಲ್ಲಿ ತಮ್ಮ ಸಹಕಾರ ಬೇಕು ಎಂದು ಗುಂಡೂರಾವ್ ಮನವಿ ಮಾಡಿದರು.