ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಪರ್ ಆಕ್ಟಿವ್ ಆಗಿದ್ದು, ಕೆಪಿಸಿಸಿ ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದ ಅವರು ಇಂದು ಆಗಮಿಸಿ ಸಭೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ಅಧ್ಯಕ್ಷರಾಗಿ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದು, ಕೊನೆಗೂ ಎರಡು ತಿಂಗಳಿಂದ ಮಂಕು ಕವಿದಿದ್ದ ಕಾಂಗ್ರೆಸ್ ಪಕ್ಷದ ಕಚೇರಿಗೆ ಕೊಂಚ ಜೀವಕಳೆ ತಂದಿದ್ದಾರೆ. ಒಂದೊಮ್ಮೆ ಹೊಸಬರ ಬದಲು ಇವರ ಕಾರ್ಯ ನಿರ್ವಹಣೆಯೇ ಉತ್ತಮವಾಗಿದೆ ಎಂದೆನಿಸಿ, ಪಕ್ಷ ಮುಂದಿನ ಒಂದೂವರೆ ವರ್ಷ ಕಾಲಾವಧಿ ಪೂರೈಸಿ ಎಂದು ತಮಗೆ ಸೂಚಿಸಬಹುದು ಎನ್ನುವ ಸುಳಿವು ಸಿಕ್ಕ ಹಿನ್ನೆಲೆ ಏಕಾಏಕಿ ಪಕ್ಷದ ಕಚೇರಿಗೆ ಆಗಮಿಸಿ ಸಭೆ ನಡೆಸಿದ್ದಾರೆ.
ಒಟ್ಟಾರೆ ಪಕ್ಷದ ಬಗ್ಗೆ ಕಳೆದೊಂದೆರಡು ತಿಂಗಳಿಂದ ತೀವ್ರ ನಿರ್ಲಕ್ಷ್ಯ ಹೊಂದಿದ್ದ ದಿನೇಶ್ ಗುಂಡೂರಾವ್ ಏಕಾಏಕಿ ಪಕ್ಷದ ಕಚೇರಿಯತ್ತ ಮುಖ ಮಾಡಿದ್ದು, ಹಲವರ ಹುಬ್ಬೇರುವಂತೆ ಮಾಡಿದೆ.