ಬೆಂಗಳೂರು: ರಾಜ್ಯ ಸರ್ಕಾರ ಜನರ ಸಾಮೂಹಿಕ ಸಮಾಧಿ ಮಾಡಲು ಷಡ್ಯಂತ್ರ ರೂಪಿಸುತ್ತಿದೆಯೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮುಖ್ಯಮಂತ್ರಿಗಳು ಲಸಿಕೆಗಾಗಿ ಬೊಬ್ಬೆ ಹೊಡೆಯಬೇಡಿ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಮೊದಲ ಡೋಸ್ ಬದಲು ಎರಡನೇ ಡೋಸ್ ಕೊಡಲೂ ಲಸಿಕೆಯಿಲ್ಲ. ರಾಜ್ಯದಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಶೇ. 5ರಷ್ಟು ತಲುಪಿಲ್ಲ. ಇದೇನು ಜನರನ್ನು ಸಾಮೂಹಿಕ ಸಮಾಧಿ ಮಾಡುವ ಷಡ್ಯಂತ್ರವೆ? ಹೀಗಿರುವಾಗ ಜನ ಲಸಿಕೆಗಾಗಿ ಬೊಬ್ಬೆ ಹೊಡೆಯದೆ ಭರತನಾಟ್ಯ ಮಾಡಬೇಕೆ? ಎಂದು ಕೇಳಿದ್ದಾರೆ.
ಕೇಂದ್ರದ ವಿರುದ್ಧ ವಾಗ್ದಾಳಿ:
ಕೇಂದ್ರ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿರುವ ದಿನೇಶ್ ಗುಂಡೂರಾವ್, 13,000 ಕೋಟಿ ರೂ. ವೆಚ್ಚದ ಸೆಂಟ್ರಲ್ ವಿಸ್ತಾ ಯೋಜನೆ ಈ ಪರಿಸ್ಥಿತಿಯಲ್ಲಿ ದೇಶಕ್ಕೆ ಅಗತ್ಯವಿದೆಯೆ? ಕೋವಿಡ್ ಜನರ ಬದುಕನ್ನೇ ಹೈರಾಣು ಮಾಡಿದೆ. ಕೇಂದ್ರ ಜನರ ಆರೋಗ್ಯದ ಕಾಳಜಿ ವಹಿಸದೆ ಇಂತಹ ಆಡಂಬರ, ಐಷಾರಾಮದ ಯೋಜನೆಗೆ ಕೈ ಹಾಕಿ ಯಾರನ್ನೂ ಮೆಚ್ಚಿಸಲು ಹೊರಟಿದೆ. ಹೊಟ್ಟೆಗೆ ಹಿಟ್ಟಿಲ್ಲ, ಆದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂದು ಟೀಕಿಸಿದ್ದಾರೆ.